ಶಾಸಕನಾಗಲಿಲ್ಲ… ಜಿ.ಪಂ. ಚುನಾವಣೆಯೂ ಇಲ್ಲ… ಈ ರಾಜಕೀಯವೇ ಬೇಡ: ವಿಪಿ ಶಶಿಧರ್ ಆಕ್ರೋಶದ ಅಳಲು
ಶಾಸಕನಾಗಲು ಬಿಡಲಿಲ್ಲ, ಈಗ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸಲು ಅಡ್ಡಿ: ಶಶಿಧರ್ ಅಳಲು
ಕುಶಾಲನಗರ: ಜಿಲ್ಲೆಯ ಹಿರಿಯ ರಾಜಕಾರಣಿ ವಿ.ಪಿ. ಶಶಿಧರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಟಿವಿ 1ಗೆ ನೀಡಿದ ಹೇಳಿಕೆಯಲ್ಲಿ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಿರುವ ಅವರು, ತಮ್ಮದೇ ಹಿತಶತ್ರುಗಳು ರಾಜಕೀಯವಾಗಿ ತಮ್ಮನ್ನು ನಿರ್ನಾಮ ಮಾಡಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರಾಗುವ ಅವಕಾಶವನ್ನು ತಪ್ಪಿಸಲಾಯಿತು. ಇದೀಗ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಸ್ಪರ್ಧಿಸದಂತೆ ಮಾಡಿದ್ದಾರೆ ಎಂದು ಆರೋಪಿಸಿರುವ ಶಶಿಧರ್, ರಾಜಕೀಯವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಇನ್ನು ಮುಂದೆ ರಾಜಕೀಯದಿಂದ ದೂರ ಉಳಿದು, ತಮ್ಮನ್ನು ನಂಬಿರುವ ಬೆಂಬಲಿಗರೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಶಶಿಧರ್ ನಿರ್ಧಾರಕ್ಕೆ ಬೆಂಬಲಿಗರ ಆಕ್ರೋಶ!
ವಿ.ಪಿ. ಶಶಿಧರ್ ಅವರ ರಾಜಕೀಯ ನಿವೃತ್ತಿ ಘೋಷಣೆ ಬೆಂಬಲಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಹಿರಿಯ ನಾಯಕರು ಏಕಾಏಕಿ ನಿವೃತ್ತಿ ಘೋಷಿಸಿರುವುದು ಅವರ ಬೆಂಬಲಿಗರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಶಿಧರ್ ಅವರ ರಾಜಕೀಯ ನಿವೃತ್ತಿಯ ಹಿಂದೆ ಇರುವ ಕಾರಣಗಳೇನು? ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲಾಗಿದೆಯೇ? ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

