ನಾಪೋಕ್ಲು ಸರ್ಕಾರಿ ಪಿಯು ಕಾಲೇಜಿಗೆ ₹1.75 ಕೋಟಿ ಅನುದಾನ
ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಪೊನ್ನಣ್ಣರಿಂದ ಭೂಮಿಪೂಜೆ
ನಾಪೋಕ್ಲು: ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿಯ ನಾಪೋಕ್ಲು ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ಭೇಟಿ ನೀಡಿದ ಅವರು, ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ₹1.75 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಶಿಕ್ಷಣ ಪಡೆದ ಸಮಾಜ ಸದೃಢವಾಗಿರುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಅವರ ಬೇಡಿಕೆಗೆ ಸ್ಪಂದಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೌಕತ್ ಆಲಿ, ವಲಯ ಅಧ್ಯಕ್ಷ ಕುಶಾಲಪ್ಪ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರೆಹಮನ್, ಕೆಡಿಪಿ ಸದಸ್ಯ ಬಾಚಮಾಂಡ ಲವ ಚಿಣ್ಣಪ್ಪ, ಕಕ್ಕಬೆ ವಲಯ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ, ಸದಸ್ಯ ಅರುಣ್ ಬೇಬ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಪಕ್ಷದ ಮುಖಂಡರಾದ ತಮ್ಮಯ್ಯ, ಎಡಪಾಲ ಶಾಫಿ, ಆಫ್ರು ರವೀಂದ್ರ, ಹ್ಯಾರೀಶ್, ಕಾಲೇಜಿನ ಉಪಾಧ್ಯಕ್ಷ ಉದಯ ಶಂಕರ್, ಪ್ರಾಂಶುಪಾಲರಾದ ವಿಶಾಲ, ಶಾಂತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


