ಗೋಣಿಕೊಪ್ಪ : ಜಿಲ್ಲೆಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವವರ ಮೇಲೆ ಧಮ್ಕಿ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಕೊಡಗಿನ ರಾಜಕೀಯ ವಾತಾವರಣದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಕೊಡಗಿನ ಸಮಸ್ಯೆಗಳು ಮತ್ತು ಸಲಹೆಗಳು ಎಂಬ ವಾಟ್ಸಪ್ ಬಳಗದ ಸ್ಥಾಪಕ ಅಡ್ಮಿನ್ ಹಾಗೂ ಸಾಮಾಜಿಕ ಕಾರ್ಯಕರ್ತ ವಿಷ್ಣು ನಾಚಪ್ಪ ಹಾಗು ಸಂಪತ್ ಎಂಬುವವರ ಮೇಲೆ ಗುರುವಾರ ರಾತ್ರಿ ಹಲ್ಲೆ ಯತ್ನ ಹಾಗು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಷ್ಣು ನಾಚಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಬಿಜೆಪಿ ಕಾರ್ಯಕರು ಹಲವರು ಆದನ್ನು ಹಂಚಿಕೊಂಡಿದ್ದಾರೆ.

ಅವರ ಹೇಳಿಕೆಯಂತೆ “ತಮಗೆ ಈ ಹಿಂದೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಬಳಿಕ ಸಂಪತ್ ಚಾಂಗುಲಂಡ ಅವರಿಗೂ ಧಮ್ಕಿ ಹಾಕಲಾಗಿದ್ದು, ಇದೀಗ ತಮ್ಮ ಮೇಲೂ ಬೆದರಿಕೆ ಹಾಕಲಾಗಿದೆ ಎಂದು ವಿಷ್ಣು ನಾಚಪ್ಪ ಆರೋಪಿಸಿದ್ದಾರೆ. ಇಂತಹ ಬೆಳವಣಿಗೆಗಳಿಂದ ಶಾಸಕರ ಹಾಗೂ ಪಕ್ಷದ ಹೆಸರಿಗೆ ಕೆಟ್ಟ ಹೆಸರು ಬರುತ್ತದೆ. ಆದರೆ ಧಮ್ಕಿಗಳ ಮೂಲಕ ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಸಮಸ್ಯೆಗಳಿಗೆ ವೇದಿಕೆಯಾದ ವಾಟ್ಸ್‌ಆ್ಯಪ್ ಗ್ರೂಪ್

‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ಆರಂಭವಾಗಿ ಐದು ವರ್ಷಗಳಾಗಿವೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಗ್ರೂಪ್ ಅಲ್ಲ. ಕೊಡಗಿನ ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆರಂಭಿಸಿದ ವೇದಿಕೆಯಾಗಿದೆ ಎಂದು ವಿಷ್ಣು ನಾಚಪ್ಪ ತಿಳಿಸಿದ್ದಾರೆ.

ಈ ಅವಧಿಯಲ್ಲಿ ನೂರಾರು ಚರ್ಚೆಗಳು ನಡೆದಿದ್ದು, ಹಲವು ಸಮಸ್ಯೆಗಳು ಗ್ರೂಪ್ ಮೂಲಕವೇ ಪರಿಹಾರ ಕಂಡುಕೊಂಡಿವೆ. ಸರ್ಕಾರದ ಗಮನಕ್ಕೆ ಬಾರದ ಸಣ್ಣಪುಟ್ಟ ಸಮಸ್ಯೆಗಳನ್ನೂ ಆಡಳಿತ ವರ್ಗದ ಗಮನಕ್ಕೆ ತರಲು ಸಾಧ್ಯವಾಗಿದೆ. ಇದೇ ಗ್ರೂಪಿನ ಯಶಸ್ಸು ಎಂದು ಅವರು ಹೇಳಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದಾಗ ವೈಯಕ್ತಿಕವಾಗಿ ದಾಳಿ ನಡೆಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯದಂತೆ ಬೆದರಿಕೆ ಹಾಕುವುದು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಹಲ್ಲೆಗೆ ಯತ್ನ, ಕೊಲೆ ಬೆದರಿಕೆಯ ಆರೋಪ

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ತಮ್ಮ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು, ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಷ್ಣು ನಾಚಪ್ಪ ಆರೋಪಿಸಿದ್ದಾರೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಕ್ಕೆ ಇಂತಹ ವರ್ತನೆ ತೋರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕವಾಗಿ ಬರೆಯದೆ, ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಪ್ರಶ್ನೆ ಮಾಡಲಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿಗೆ ವೈಚಾರಿಕವಾಗಿ ಉತ್ತರ ನೀಡಬೇಕೇ ಹೊರತು, ವೈಯಕ್ತಿಕ ದಾಳಿ ಹಾಗೂ ಕುಟುಂಬದ ಮೇಲೆ ಒತ್ತಡ ಹೇರುವ ಮೂಲಕ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಇದೇ ರೀತಿಯ ಧಮ್ಕಿ ರಾಜಕೀಯದಿಂದ ತಮ್ಮ ಗ್ರೂಪಿನ ಅಡ್ಮಿನ್ ಆಗಿದ್ದ ವಿನಯ್ ಸೋಮಯ್ಯ ಅವರಂತಹ ಯುವಕನನ್ನು ಕಳೆದುಕೊಳ್ಳಬೇಕಾಯಿತು ಎಂದು ವಿಷ್ಣು ನಾಚಪ್ಪ ನೋವು ವ್ಯಕ್ತಪಡಿಸಿದ್ದಾರೆ.

ಕಾನೂನಿನ ಮೇಲೆ ನಂಬಿಕೆ

ಕೊಡಗು ಉಳಿಯಬೇಕು, ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂಬುದೇ ತಮ್ಮ ಉದ್ದೇಶ. ಸಂವಿಧಾನ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ನೀಡಿದೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ವಕೀಲರ ತಂಡವಿದ್ದು, ನ್ಯಾಯಾಲಯದ ಮೂಲಕ ನ್ಯಾಯ ಪಡೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

— ವಿಷ್ಣು ನಾಚಪ್ಪ ಅವರ ಹೇಳಿಕೆಯ ಆಧಾರದಲ್ಲಿ

 

2022 ರಲ್ಲೂ ನಡೆದಿತ್ತು ಇಂತಹ ಘಟನೆ

2022 ರಲ್ಲೂ ಆಗಿನ ಶಾಸಕ ಕೆಜಿ ಬೋಪಯ್ಯ ವಿರುದ್ಧ ರಸ್ತೆಗಳ ಬಗ್ಗೆ ಪ್ರಶ್ನಿಸಿದ್ದ ಆಟೋ ಚಾಲಕ ಒಬ್ಬರಿಗೆ ಬಿಜೆಪಿ ಕಾರ್ಯಕರ್ತರು ಧಮ್ಕಿ ಹಾಕಿದ್ದರು. ಆಟೋ ಚಾಲಕ ಒಬ್ಬರು ವಿರಾಜಪೇಟೆ ಮಡಿಕೇರಿ ರಸ್ತೆಯ ಅವ್ಯವಸ್ಥೆ ಬಗ್ಗೆ ಒಂದು ವಿಡಿಯೋ ಮಾಡಿ ಕೆ ಜಿ ಬೋಪಯ್ಯ ಅವರನ್ನು ಕಟುವಾಗಿ ಪ್ರಶ್ನೆ ಮಾಡಿದ್ದರು. ಈ ಕಾರಣಕ್ಕಾಗಿ ಪೋಲಿಸ್ ಸಿಬ್ಬಂದಿಯೊಬ್ಬರೂ ಸೇರಿದಂತೆ ಬಿಜೆಪಿ ಕಾರ್ಯಕರ್ತರೂ ಬೆದರಿಕೆ ಹಾಕಿದ್ದರು.

ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಶ್ನಿಸುವುದು ತಪ್ಪೇ? ಧಮ್ಕಿಗಳ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿರುವ ವಿಷ್ಣು ನಾಚಪ್ಪ ಅವರ ಹೇಳಿಕೆ ಇದೀಗ ಕೊಡಗಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

Exit mobile version