ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ
350 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ, ₹4.50 ಲಕ್ಷ ನಗದು ಪತ್ತೆ
₹1 ಕೋಟಿ ಮೌಲ್ಯದ ಸ್ಥಿರಾಸ್ತಿ ದಾಖಲೆಗಳೂ ಲೋಕಾಯುಕ್ತರ ವಶ
ಮಡಿಕೇರಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಹಾಗೂ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆ ಆಯುಕ್ತ ಎಚ್.ಆರ್. ರಮೇಶ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಅಧಿಕಾರಿಗಳ ವಿರುದ್ಧ ನಡೆದ ಲೋಕಾಯುಕ್ತ ಕಾರ್ಯಾಚರಣೆಯ ಭಾಗವಾಗಿ ಮಡಿಕೇರಿ ನಗರಸಭೆ ಆಯುಕ್ತರ ನಿವಾಸ ಹಾಗೂ ಇತರ ಸ್ಥಳಗಳಲ್ಲೂ ಶೋಧ ನಡೆದಿದೆ.
ನಗರಸಭೆ ಕಚೇರಿ, ಆಯುಕ್ತರ ಮನೆ, ಸರ್ಕಾರಿ ವಸತಿ ಗೃಹ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಆಯುಕ್ತರ ಮಗಳ ಮನೆ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳಲ್ಲೂ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.
ದಾಳಿ ವೇಳೆ 350 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಹಾಗೂ ₹4.50 ಲಕ್ಷ ನಗದು ಪತ್ತೆಯಾಗಿದ್ದು, ಸುಮಾರು ₹1 ಕೋಟಿ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ದಾಖಲೆಗಳು ಮತ್ತು ಚಿನ್ನಾಭರಣಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯನ್ನು ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ನಡೆಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳಾದ ವೀಣಾ ನಾಯಕ್, ಸುಧಾಕರ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಮಡಿಕೇರಿ ತಾಲೂಕಿನ ದಾಸವಾಳದಲ್ಲಿರುವ ಸರ್ಕಾರಿ ವಸತಿ ಗೃಹ ಹಾಗೂ ಕರ್ಣಂಗೇರಿಯಲ್ಲಿರುವ ಆಯುಕ್ತರ ತಾಯಿಯ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಸಂಜೆ ವೇಳೆಗೆ ಲೋಕಾಯುಕ್ತ ಅಧಿಕಾರಿಗಳು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.



