ಓಣಂ ಸಂಭ್ರಮದಲ್ಲಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗಿ
ವಿರಾಜಪೇಟೆ: ವಿರಾಜಪೇಟೆಯಲ್ಲಿ ನಡೆದ 18ನೇ ವರ್ಷದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ಶುಭಾಶಯ ಕೋರಿದರು.
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಮೀನುಪೇಟೆಯಲ್ಲಿ ಶ್ರೀ ಮುತ್ತಪ್ಪ ಮಲೆಯಾಳಿ ಸಮಾಜದ ವತಿಯಿಂದ ಓಣಂ ಆಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಓಣಂ ಆಚರಣೆಯು ವಿಶ್ವಾದ್ಯಂತ ಪ್ರಖ್ಯಾತಿಯನ್ನು ಪಡೆದಿದ್ದು, ಕೇರಳದ ವಿಭಿನ್ನ ಸಂಸ್ಕೃತಿಯ ಈ ವಿಶಿಷ್ಟ ಹಬ್ಬವು ದೇಶದ ವಿವಿಧ ಭಾಗಗಳಲ್ಲೂ ಆಚರಿಸಲ್ಪಡುತ್ತಿರುವುದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಲಯಾಳಿ ಸಮಾಜದವರು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಓಣಂ ಹಬ್ಬವು ಸಕಲ ಮನುಕುಲಕ್ಕೆ ಒಳಿತನ್ನು ತರಲಿ. ನಾಡಿನ ಪ್ರತಿಯೊಬ್ಬರ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಸುಭಿಕ್ಷೆ ನೆಲೆಸಲಿ ಎಂದು ಹಾರೈಸಿದರು.

