ಪೊನ್ನಂಪೇಟೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾನೂರು ಭಾಗದ ರಸ್ತೆ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದ್ದು, ₹5 ಕೋಟಿ 30 ಲಕ್ಷ ವಿಶೇಷ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಪೊನ್ನಂಪೇಟೆ–ಬೆಕ್ಕೆಸೊಡ್ಲೂರು–ಕಾನೂರು–ಬ್ರಹ್ಮಗಿರಿ–ನಿಟ್ಟೂರು ಸಂಪರ್ಕಿಸುವ ಈ ನೂತನ ರಸ್ತೆ ನಿರ್ಮಾಣದಿಂದ ಈ ಭಾಗದ ಸಾರ್ವಜನಿಕರಿಗೆ ಸುಗಮ ಸಂಚಾರದ ಸೌಲಭ್ಯ ದೊರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಸಾರ್ವಜನಿಕರ ಬಹುಕಾಲದ ಬೇಡಿಕೆಯ ಮೇರೆಗೆ ವಿಶೇಷ ಅನುದಾನ ಒದಗಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರ ಸ್ವತ್ತನ್ನು ನಮ್ಮ ಸ್ವಂತ ಆಸ್ತಿಯಂತೆ ಭಾವಿಸಿ ಕಾಪಾಡಿಕೊಳ್ಳಬೇಕು ಹಾಗೂ ನೂತನ ರಸ್ತೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಹಿರಿಯ ಮುಖಂಡ ಮುಕಳೇರ ಕುಶಾಲಪ್ಪ, ವಲಯ ಅಧ್ಯಕ್ಷ ರಮೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪದವಿ ಧನ್ಯ, ಪಂಚಾಯಿತಿ ಸದಸ್ಯ ಬೋಪಣ್ಣ, ಪಕ್ಷದ ಮುಖಂಡರಾದ ಕೇಚಮಾಡ ಸಿದ್ದು ನಾಚಪ್ಪ, ಮಾಚಮಾಡ ಮನು, ನಿಖಿಲ್, ಸೋಮಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

