ಅರಣ್ಯ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತೀವ್ರವಾಗುತ್ತಿರುವ ಮಾನವ–ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದಂತೆ ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಮಡಿಕೇರಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ಆಗಸ್ಟ್ 28ರಂದು ಸಚಿವರು ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ ತೆರಳಿ, ಬೆಳಗ್ಗೆ 9.45ಕ್ಕೆ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾ–2026ರ ‘ಗಜಪಡೆಗೆ ಸುಸ್ವಾಗತ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಂತರ ಬೆಳಗ್ಗೆ 11.30ಕ್ಕೆ ಮೈಸೂರಿನಿಂದ ರಸ್ತೆ ಮೂಲಕ ಮಡಿಕೇರಿಗೆ ಪ್ರಯಾಣಿಸಲಿರುವ ಸಚಿವರು ಮಧ್ಯಾಹ್ನ 2 ಗಂಟೆಗೆ ಮಡಿಕೇರಿಗೆ ಆಗಮಿಸಲಿದ್ದಾರೆ.

ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಮಾನವ–ವನ್ಯಜೀವಿ ಸಂಘರ್ಷದಿಂದಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆ ಹಾನಿ, ಆಸ್ತಿ ಹಾನಿ ಹಾಗೂ ಮಾನವ ಜೀವಹಾನಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ಸಭೆ ಮಹತ್ವ ಪಡೆದುಕೊಂಡಿದೆ.

ಸಭೆಯಲ್ಲಿ ಸಂಘರ್ಷ ನಿಯಂತ್ರಣ, ಕಾಡುಪ್ರಾಣಿಗಳ ಹಾವಳಿ ತಡೆ, ಅರಣ್ಯ ಇಲಾಖೆಯ ಕಾರ್ಯಾಚರಣೆ, ಸಾರ್ವಜನಿಕರ ಸುರಕ್ಷತೆ ಹಾಗೂ ರೈತರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಸಭೆ ಮುಗಿದ ಬಳಿಕ ಸಚಿವ ರಾಮಲಿಂಗಾರೆಡ್ಡಿ ಅವರು ಮಡಿಕೇರಿಯಿಂದ ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

Exit mobile version