ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ; ಜನವಸತಿ ಮತ್ತು ಕೃಷಿ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ಸೇರಿಸದಂತೆ ಒತ್ತಾಯ — ಫಿಸಿಕಲ್ ವೆರಿಫಿಕೇಷನ್‌ಗೆ ಸಂಸದರಿಂದ ಸಲಹೆ
ಮಡಿಕೇರಿ: ಕಸ್ತೂರಿರಂಗನ್ ವರದಿ ಅನುಷ್ಠಾನ ಕುರಿತು ಕೊಡಗಿನ ಜನತೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಯ ನೀಡಿದ್ದಾರೆ.
ಮಡಿಕೇರಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪ್ರಮುಖರೊಂದಿಗೆ ಕಸ್ತೂರಿರಂಗನ್ ವರದಿ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.
ಪ್ರಸ್ತುತ ಕರಡು ಅಧಿಸೂಚನೆಯ ಹಂತದಲ್ಲಿರುವುದರಿಂದ ಇನ್ನೂ ಹಲವು ಸುತ್ತಿನ ಚರ್ಚೆಗಳು ನಡೆಯಬೇಕಿವೆ. ಕೊಡಗಿನ ಜನರು ಪ್ರಕೃತಿಯನ್ನು ರಕ್ಷಿಸುವ ಹಾಗೂ ಗೌರವಿಸುವ ಗುಣ ಹೊಂದಿದ್ದು, ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸ್ಥಳೀಯರ ಹಿತಾಸಕ್ತಿಯನ್ನು ಪರಿಗಣಿಸಬೇಕಾಗಿದೆ ಎಂದು ಸಂಸದರು ಹೇಳಿದರು.
ಕೇರಳದಲ್ಲಿ ಅನುಸರಿಸಿರುವ ಮಾದರಿಯಂತೆ ಕೊಡಗಿನಲ್ಲಿ ಬಫರ್ ಜೋನ್ ಅನ್ನು ಶೂನ್ಯ ಕಿಲೋಮೀಟರ್‌ಗೆ ನಿಗದಿಪಡಿಸುವಂತೆ ಒತ್ತಾಯಿಸಲಾಗುವುದು. ಜನವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ಸೇರಿಸಬಾರದು. ಈ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಯದುವೀರ್ ಒಡೆಯರ್ ಮನವಿ ಮಾಡಿದರು.
ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ. ಬದಲಾಗಿ ಸ್ಥಳಕ್ಕೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸುವ ಫಿಸಿಕಲ್ ವೆರಿಫಿಕೇಷನ್ ನಡೆಸಬೇಕು ಎಂಬ ಸಲಹೆಯನ್ನು ನೀಡಲಾಗಿದೆ. ಈ ಸಲಹೆಯನ್ನು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿಯೂ ಇದೇ ರೀತಿಯ ಫಿಸಿಕಲ್ ವೆರಿಫಿಕೇಷನ್ ನಡೆಸಿ, ನೈಜ ಪರಿಸ್ಥಿತಿಯನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ವಿವಿಧ ಮುಖಂಡರು ಒತ್ತಾಯಿಸಿದರು.
ಸಭೆ ಪಕ್ಷಾತೀತವಾಗಿ ನಡೆದಿದ್ದರೂ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಭಾಗವಹಿಸದಿರುವುದಕ್ಕೆ ಕೆಲವರು ಬೇಸರ ವ್ಯಕ್ತಪಡಿಸಿದರು. ಕೊಡಗಿನ ಜನರ ಬದುಕು, ಕೃಷಿ ಹಾಗೂ ಪರಿಸರಕ್ಕೆ ನೇರವಾಗಿ ಸಂಬಂಧಿಸಿದ ಈ ಮಹತ್ವದ ವಿಚಾರದಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಒಗ್ಗಟ್ಟಿನಿಂದ ಚರ್ಚೆ ನಡೆಸಬೇಕಿತ್ತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಂವಾದದಲ್ಲಿ ಶಾಸಕ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಹ್ಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಮುಖಂಡರು ಭಾಗವಹಿಸಿದ್ದರು.



