ಮುಖ್ಯಮಂತ್ರಿಯಾದ ಬಳಿಕ ಕೊಡಗಿಗೆ ಡಿಕೆ ಶಿವಕುಮಾರ್ ಮೊದಲ ಭೇಟಿ — ಭಗಂಡೇಶ್ವರನಿಗೆ ವಿಶೇಷ ಪೂಜೆ
ಭಾಗಮಂಡಲ: ಮಳೆಯ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಭಾಗಮಂಡಲಕ್ಕೆ ಆಗಮಿಸಿದರು. ಮುಖ್ಯಮಂತ್ರಿಯಾದ ಬಳಿಕ ಕೊಡಗು ಜಿಲ್ಲೆಗೆ ಇದು ಅವರ ಮೊದಲ ಭೇಟಿ.
ಕಾವೇರಿ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಿದ ಸಿಎಂ ಅವರನ್ನು ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್, ಅರುಣ್ ಮಾಚಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಬಳಿಕ ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ತೆರಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಗಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಹೆಲಿಕಾಪ್ಟರ್ ಮೂಲಕ ಮಡಿಕೇರಿಗೆ ತೆರಳಲಿರುವ ಸಿಎಂ ಅವರನ್ನು ಸ್ವಾಗತಿಸಲು ಜನರಲ್ ತಿಮ್ಮಯ್ಯ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸಜ್ಜಾಗಿದ್ದಾರೆ.
ಮಳೆಯ ಸಿಂಚನದ ನಡುವೆಯೇ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಡೆ ಮುಖ್ಯಮಂತ್ರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದೆ.

