ಅವ್ಯವಸ್ಥೆ ಪ್ರಶ್ನಿಸಿದ ಕರವೇ ಪದಾಧಿಕಾರಿಗಳಿಗೆ ಪೊಲೀಸ್ ದೂರು ನೀಡುವ ಬೆದರಿಕೆ ಆರೋಪ
ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಮದ್ಯದ ವಾಸನೆ, ಬಟ್ಟೆಗಳು ಪತ್ತೆ: ಕುಶಾಲನಗರ ಕೆಎಸ್‌ಆರ್‌ಟಿಸಿ ಅವ್ಯವಸ್ಥೆಗೆ ಕರವೇ ಆಕ್ರೋಶ
ಕುಶಾಲನಗರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯ ಅವ್ಯವಸ್ಥೆ ಹಾಗೂ ಸ್ವಚ್ಛತೆಯ ಕೊರತೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮಹಿಳಾ ವಿಶ್ರಾಂತಿ ಕೊಠಡಿಯಿಂದ ವಿಪರೀತ ದುರ್ವಾಸನೆ ಬರುತ್ತಿದ್ದು, ಕೊಠಡಿ ಬಳಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕ ಮಹಿಳೆಯರು ಕರವೇ ಪದಾಧಿಕಾರಿಗಳ ಬಳಿ ದೂರು ನೀಡಿದ ಹಿನ್ನೆಲೆಯಲ್ಲಿ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್ ಹಾಗೂ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷೆ ಭವ್ಯ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಈ ವೇಳೆ ಕೊಠಡಿಯೊಳಗೆ ಮದ್ಯಪಾನದ ಕುರುಹು, ಮಹಿಳೆಯರ ಪ್ಯಾಂಟ್‌ಗಳು ಹಾಗೂ ಬಟ್ಟೆಗಳು, ಎಲೆ-ಅಡಿಕೆ ಚೀಲ ಸೇರಿದಂತೆ ವಿವಿಧ ಕಸದ ವಸ್ತುಗಳು ಪತ್ತೆಯಾಗಿವೆ ಎಂದು ಸಂಘಟನೆ ಆರೋಪಿಸಿದೆ. ಮಹಿಳೆಯರಿಗಾಗಿ ಮೀಸಲಾದ ಕೊಠಡಿಯಲ್ಲಿ ಇಂತಹ ವಸ್ತುಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ವಿಶೇಷವಾಗಿ ಸಣ್ಣ ಮಕ್ಕಳೊಂದಿಗೆ ಬರುವ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಹಾಗೂ ವಿಶ್ರಾಂತಿ ಪಡೆಯಲು ಇಂತಹ ಕೊಠಡಿಗಳನ್ನು ಅವಲಂಬಿಸುತ್ತಾರೆ. ಆದರೆ ಕುಶಾಲನಗರದಂತಹ ಪ್ರಮುಖ ಪ್ರವಾಸಿ ಕೇಂದ್ರದ ಬಸ್ ನಿಲ್ದಾಣದಲ್ಲೇ ಮಹಿಳಾ ವಿಶ್ರಾಂತಿ ಕೊಠಡಿ ಈ ರೀತಿಯ ದುಸ್ಥಿತಿಯಲ್ಲಿರುವುದು ಖಂಡನೀಯ ಎಂದು ಕರವೇ ಪದಾಧಿಕಾರಿಗಳು ಹೇಳಿದ್ದಾರೆ.
ಇದಲ್ಲದೆ, ಮಕ್ಕಳಿಗಾಗಿ ತೊಟ್ಟಿಲಿನ ವ್ಯವಸ್ಥೆಯೂ ಇಲ್ಲದಿರುವುದನ್ನು ಸಂಘಟನೆಯ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಅವ್ಯವಸ್ಥೆ ಕುರಿತು ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ಅವರನ್ನು ಪ್ರಶ್ನಿಸಿದಾಗ, ಸಮಸ್ಯೆ ಪರಿಹರಿಸುವ ಬದಲು ಸಂಘಟನೆಯ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕರವೇ ಆರೋಪಿಸಿದೆ.
“ಸಾರ್ವಜನಿಕರ ಸಮಸ್ಯೆಯನ್ನು ಪ್ರಶ್ನಿಸುವುದು ತಪ್ಪೇ? ಮಹಿಳೆಯರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನಿಸಿದರೆ ಪೊಲೀಸ್ ದೂರು ನೀಡುವುದಾಗಿ ಬೆದರಿಸುವುದು ಯಾವ ನ್ಯಾಯ?” ಎಂದು ಸಂಘಟನೆ ಪ್ರಶ್ನಿಸಿದೆ.
ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಮದ್ಯಪಾನದ ಕುರುಹುಗಳು ಹಾಗೂ ಬಟ್ಟೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆದಿದೆಯೇ ಎಂಬುದರ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಕರವೇ ಆಗ್ರಹಿಸಿದೆ.
ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಹಿಳಾ ವಿಶ್ರಾಂತಿ ಕೊಠಡಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷಿತ ಹಾಗೂ ಬಳಕೆಗೆ ಯೋಗ್ಯವಾಗಿಸಬೇಕು. ಮಕ್ಕಳಿಗಾಗಿ ಅಗತ್ಯ ತೊಟ್ಟಿಲಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಂಘಟನೆಯ ಪದಾಧಿಕಾರಿಗಳಿಗೆ ಬೆದರಿಕೆ ಹಾಕಿದರೆಂಬ ಆರೋಪದ ಬಗ್ಗೆಯೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸಮಸ್ಯೆ ಬಗೆಹರಿಸದಿದ್ದರೆ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು ಹಾಗೂ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷೆ ಭವ್ಯ ಉಪಸ್ಥಿತರಿದ್ದರು.

