
ಕುಶಾಲನಗರ: ನಿನ್ನೆ ಮೊನ್ನೆಯವರೆಗೂ ಮನೆಯಂಗಳದಲ್ಲಿ ನಗುತ್ತಾ, ಓಡಾಡುತ್ತಾ ಆಟವಾಡುತ್ತಿದ್ದ ನಾಲ್ಕು ವರ್ಷದ ಪುಟ್ಟ ಕಂದಮ್ಮ ಅಪೂರ್ವ, ದುರಾದೃಷ್ಟವಶಾತ್ ಗೇಟ್ ಬಿದ್ದು ಮೃತಪಟ್ಟಿರುವ ಘಟನೆ ಬಸವನಹಳ್ಳಿ ಹಾಡಿಯಲ್ಲಿ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.
ಮಗುವಿನ ಅಗಲಿಕೆಯ ನೋವಿನಿಂದ ಕಂಗೆಟ್ಟಿರುವ ಕುಟುಂಬದ ಮನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ, ಪುಟ್ಟ ಅಪೂರ್ವನಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ದುಃಖತಪ್ತ ಪೋಷಕರನ್ನು ಭೇಟಿಯಾಗಿ, ಅವರ ನೋವಿಗೆ ಸಾಂತ್ವನ ಹೇಳಿದರು.
ಮಗುವನ್ನು ಕಳೆದುಕೊಂಡ ತಾಯಿಯ ಕಣ್ಣೀರು… ತಂದೆಯ ಮೌನದ ನೋವು… ಕಂಡು ಶಾಸಕ ಮಂತರ್ ಗೌಡ ಭಾವುಕರಾದರು. ಇಂತಹ ದುರಂತ ಮತ್ತೊಂದು ಕುಟುಂಬಕ್ಕೆ ಎದುರಾಗದಂತೆ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.
“ನಾಲ್ಕು ವರ್ಷದ ಕಂದಮ್ಮನನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಅಪೂರ್ವನ ಕುಟುಂಬದ ಈ ಕಷ್ಟದ ಸಮಯದಲ್ಲಿ ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ” ಎಂದು ಪೋಷಕರಿಗೆ ಧೈರ್ಯ ತುಂಬಿದರು.
ನಗುತ್ತಾ ಓಡಾಡಬೇಕಿದ್ದ ಪುಟ್ಟ ಹೆಜ್ಜೆಗಳು ಶಾಶ್ವತವಾಗಿ ನಿಂತುಹೋಗಿದ್ದು, ಅಪೂರ್ವನ ಅಗಲಿಕೆ ಕುಟುಂಬದ ಪಾಲಿಗೆ ಎಂದಿಗೂ ತುಂಬಲಾರದ ನೋವಾಗಿ ಉಳಿದಿದೆ ಎಂದು ಶಾಸಕ ಮಂತರ್ ನೋವಿನ ಭಾವನೆಗಳನ್ನು ತೋಡಿಕೊಂಡರು

