ಕೊಡಗಿನಲ್ಲಿ ಶೇ.37ರಷ್ಟು ಮಳೆ ಕೊರತೆ: ಸರ್ಕಾರಕ್ಕೆ ವರದಿ – ಸಚಿವ ನರೇಂದ್ರಸ್ವಾಮಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.37ರಷ್ಟು ಮಳೆ ಕೊರತೆಯಾಗಿದ್ದು, ಜಿಲ್ಲೆಯ ಮಳೆ ಪ್ರಮಾಣ, ಹಾರಂಗಿ ಜಲಾಶಯದ ನೀರಿನ ಮಟ್ಟ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದ್ದಾರೆ.
ಮಡಿಕೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಅತಿವೃಷ್ಟಿ–ಅನಾವೃಷ್ಟಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಹವಾಮಾನ ವೈಪರಿತ್ಯದಿಂದ ಮುಂಗಾರು ತಡವಾಗಿ ಆರಂಭವಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಆಗಸ್ಟ್ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಭತ್ತ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.
ಮಳೆಯಿಂದಾಗಿ ಜಿಲ್ಲೆಯ ವಿವಿಧ ರಸ್ತೆಗಳು ಹಾಳಾಗಿದ್ದು, ಗುಂಡಿಗಳನ್ನು ಮುಚ್ಚಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ರಸ್ತೆ ದುರಸ್ತಿ ಕಾಮಗಾರಿಗೆ ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಚಿವರು ಸೂಚಿಸಿದರು.
ಜುಲೈನಲ್ಲಿ ವಾಡಿಕೆ 859 ಮಿ.ಮೀ., ವಾಸ್ತವ ಮಳೆ 599 ಮಿ.ಮೀ.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾಹಿತಿ ನೀಡಿ, ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ 859 ಮಿ.ಮೀ. ಮಳೆಯಾಗಬೇಕಿದ್ದರೂ 599 ಮಿ.ಮೀ. ಮಾತ್ರ ಮಳೆಯಾಗಿದೆ ಎಂದು ತಿಳಿಸಿದರು. ಶಾಂತಳ್ಳಿ, ಕುಶಾಲನಗರ ಹಾಗೂ ಹುದಿಕೇರಿ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಉಳಿದ ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದೆ ಎಂದರು.
ಈ ಬಾರಿ ಭತ್ತ ಮತ್ತು ಮುಸುಕಿನ ಜೋಳ ಸೇರಿದಂತೆ ಒಟ್ಟು 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 2,800 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಾರ್ಯ ನಡೆದಿದೆ. ಆಗಸ್ಟ್ ಅಂತ್ಯದವರೆಗೆ ಭತ್ತ ನಾಟಿ ಕಾರ್ಯ ನಡೆಯಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತ ನಾಟಿ ಪ್ರಮಾಣವೂ ಗಣನೀಯವಾಗಿ ಕುಸಿದಿದ್ದು, ಈ ಬಾರಿ ಇದುವರೆಗೆ ಶೇ.8ರಷ್ಟು ಮಾತ್ರ ಭತ್ತ ನಾಟಿ ಪೂರ್ಣಗೊಂಡಿದೆ. ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ಮಧ್ಯಮಾವಧಿ ಬೆಳೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ ಒಳಚರಂಡಿ ಕಾಮಗಾರಿ ಬಗ್ಗೆ ಅಸಮಾಧಾನ
ಕುಶಾಲನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಶಾಸಕ ಡಾ. ಮಂತರ್ ಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಒಳಚರಂಡಿ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ವಿ.ಪಿ. ಶಶಿಧರ್ ಸಚಿವರ ಗಮನಕ್ಕೆ ತಂದರು.
ಮಡಿಕೇರಿಯಲ್ಲಿಯೂ ಒಳಚರಂಡಿ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಸಚಿವರ ಗಮನ ಸೆಳೆದರು.
ಸಭೆಯ ಬಳಿಕ ಸಚಿವ ನರೇಂದ್ರಸ್ವಾಮಿ ಅವರು ಹಾರಂಗಿ ಸಮೀಪದ ಹುಲಸೆ ಗ್ರಾಮದ ಜಮೀನಿಗೆ ತೆರಳಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು.



