ಮಡಿಕೇರಿ: ದ್ವಿಚಕ್ರ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದ್ದರೂ ಕೊಡಗಿನ ಮಡಿಕೇರಿ ನಗರ ಹೊರತುಪಡಿಸಿ ಬಹುತೇಕ ನಗರ ಪಟ್ಟಣಗಳಲ್ಲಿ ಸವಾರರು ಈ ಹಿಂದೆಯಿಂದಲೂ ನಿಯಮ ಪಾಲಿಸದೆ ಇರುವುದು ಪೊಲಿಸ್ ಇಲಾಖೆಗೆ ತಲೆನೋವಾಗಿದೆ.
ಕೊಡಗಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕುಶಾಲನಗರದಲ್ಲೂ ಹಲವಾರು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದಾರೆ. ಕಾನೂನು ಗೊತ್ತಿದ್ದರೂ ನಿಯಮ ಪಾಲಿಸದಿರುವುದು ಕಂಡುಬರುತ್ತಿದೆ.
ಸಿದ್ದಾಪುರದಲ್ಲಿ ಸವಾರರನ್ನು ಕೇಳೋರಿಲ್ಲ ಹೇಳೋರಿಲ್ಲ ಅಂತಾಗಿದೆ. ಹೆಲ್ಮೆಟ್ ಕಡ್ಡಾಯ ಎಂಬ ನಿಯಮವೇ ಮರೆತುಹೋದಂತೆ ಹಲವಾರು ಸವಾರರು ಸಂಚರಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಪೊಲೀಸರು ಇದ್ದರು ಸಿದ್ದಾಪುರದಲ್ಲಿ ಸಂಚಾರಿ ನಿಯಮ ಪಾಲನೆಯಾಗುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ.
ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಸಾಮಾನ್ಯವಾಗಿರುವಂತಾಗಿದೆ. ಪೊಲೀಸರ ಕಣ್ಣ ಮುಂದೆಯೇ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಪರಿಣಾಮಕಾರಿ ಕ್ರಮ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಲೇ ಇದೆ ಹೊರತು ಕ್ರಮ ಇನ್ನು ಆಗಿಲ್ಲ.
ಶನಿವಾರಸಂತೆ, ಪಾಲಿಬೆಟ್ಟ, ಮೂರ್ನಾಡು ಹಾಗೂ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ಪಟ್ಟಣಗಳಲ್ಲೂ ಹೆಲ್ಮೆಟ್ ನಿಯಮ ಪಾಲನೆಯ ಬಗ್ಗೆ ನಿರ್ಲಕ್ಷ್ಯ ಕಂಡುಬರುತ್ತಿದೆ. ಪ್ರತಿನಿತ್ಯ ಆರಾಮವಾಗಿ ಹೆಲ್ಮೆಟ್ ಧರಿಸದೇ ಧೈರ್ಯವಾಗಿ ಸಂಚರಿಸುವ ಅದೆಷ್ಟೋ ಸವಾರರನ್ನು ಇಲ್ಲಿ ನೋಡಬಹುದು.
ಇನ್ನು ವಿರಾಜಪೇಟೆ ನಗರದಲ್ಲೂ ಹೆಲ್ಮೆಟ್ ನಿಯಮ ಪಾಲನೆಯ ವಿಚಾರದಲ್ಲಿ ಗೊಂದಲದ ಪರಿಸ್ಥಿತಿ ಇದೆ. ನಗರದ ಹೊರವಲಯದಲ್ಲಿ ಹಲವಾರು ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಹೆಲ್ಮೆಟ್ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಧರಿಸುವ ವಸ್ತುವಲ್ಲ. ಅಪಘಾತ ಸಂಭವಿಸಿದಾಗ ಸವಾರನ ಜೀವ ಉಳಿಸುವ ಪ್ರಮುಖ ಸುರಕ್ಷತಾ ಸಾಧನ. ಆದರೂ ಕಾನೂನು ಜಾರಿಯಲ್ಲಿದ್ದರೂ ಅದರ ಪಾಲನೆಗೆ ಸವಾರರು ನಿರ್ಲಕ್ಷ್ಯ ತೋರುತ್ತಿರುವುದು ಆತಂಕಕಾರಿ ಬೆಳವಣಿಗೆ.
ಹಾಗಾದರೆ ಮಡಿಕೇರಿಯಲ್ಲಿ ಮಾತ್ರ ಕಟ್ಟುನಿಟ್ಟಿನ ನಿಯಮ, ಉಳಿದ ಪಟ್ಟಣಗಳಿಗೆ ಈ ನಿಯಮವಿಲ್ಲವೇ ಎಂಬ ಪ್ರಶ್ನೆಗೆ ಸದ್ಯ ಯಾರ ಬಳಿಯೂ ಉತ್ತರವಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡದ ಜೊತೆಗೆ ಕಠಿಣ ಕ್ರಮದ ಅವಶ್ಯಕತೆಯಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಹೆಲ್ಮೆಟ್ ಕಡ್ಡಾಯದ ಬಗ್ಗೆ ನಿರಂತರ ಜಾಗೃತಿ ಮೂಡಿಸಿದರು ಕ್ಯಾರೆ ಅನ್ನದ ಬೈಕ್ ಸವಾರರಿಗೆ ಕಠಿಣ ಕ್ರಮ ಜರುಗಿಸುವ ಅವಶ್ಯಕತೆಯಿದೆ.



