ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ

ನೂರಾರು ಅಡಿಕೆ ಗಿಡಗಳು ನಾಶ; ಕೃಷಿಕರಲ್ಲಿ ಆತಂಕ – ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಚೆಟ್ಟಳ್ಳಿ: ಕೊಡಗು ಜಿಲ್ಲೆಯ ಚೆಟ್ಟಳ್ಳಿ ಸಮೀಪದ ಪೊನ್ನತ್ತುಮೊಟ್ಟೆ ತೋಟಕ್ಕೆ ಜೋಡಿ ಕಾಡಾನೆಗಳು ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿವೆ.

ಕಳೆದ ಒಂದು ವಾರದ ಹಿಂದಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟಿದ್ದರು. ಇದೀಗ ಮತ್ತೆ ಅದೇ ಪ್ರದೇಶಕ್ಕೆ ಕಾಡಾನೆಗಳು ಮರಳಿದ್ದು, ತೋಟದಲ್ಲಿದ್ದ ನೂರಾರು ಅಡಿಕೆ ಗಿಡಗಳನ್ನು ತುಳಿದು ಹಾಗೂ ಮುರಿದು ನಾಶಪಡಿಸಿವೆ. ಇದರಿಂದ ಕೃಷಿಕರಿಗೆ ಭಾರೀ ನಷ್ಟ ಉಂಟಾಗಿದೆ.

ತೋಟದಲ್ಲಿ ಕಾಡಾನೆಗಳ ಓಡಾಟದಿಂದ ಕಾರ್ಮಿಕರು ಕೂಡ ಆತಂಕಗೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೆರಳಲು ಭಯಪಡುವಂತಾಗಿದೆ. ಜೋಡಿ ಆನೆಗಳು ಮತ್ತೆ ಮತ್ತೆ ತೋಟ ಪ್ರದೇಶಕ್ಕೆ ಬರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಕಾಡಾನೆಗಳನ್ನು ಕಾಡಿಗಟ್ಟಿದ ಕೆಲವೇ ದಿನಗಳಲ್ಲಿ ಮತ್ತೆ ಅವು ತೋಟ ಪ್ರದೇಶಕ್ಕೆ ನುಗ್ಗಿರುವುದು ಅರಣ್ಯ ಇಲಾಖೆಯ ಕಾರ್ಯಾಚರಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಡಾನೆಗಳ ಶಾಶ್ವತ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೃಷಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪೊನ್ನತ್ತುಮೊಟ್ಟೆ ಭಾಗದ ಕೃಷಿಕರು ಆಗ್ರಹಿಸಿದ್ದಾರೆ.

Exit mobile version