ಮಡಿಕೇರಿ: ನಗರದ ಜಲಾಶಯ ಬಡಾವಣೆಯ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದ್ದ 50 ಲಕ್ಷ ರೂ. ವೆಚ್ಚದ ತಡೆಗೋಡೆ ಕಾಮಗಾರಿಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಲೋಕಾರ್ಪಣೆ ಮಾಡಿದರು.

2018ರ ಪ್ರಕೃತಿ ವಿಕೋಪದ ಬಳಿಕ ಜಲಾಶಯ ಬಡಾವಣೆಯಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, ಬಡಾವಣೆಯ ರಕ್ಷಣೆಗೆ ತಡೆಗೋಡೆ ನಿರ್ಮಿಸುವಂತೆ ನಿವಾಸಿಗಳು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು. ಕಳೆದ ಮಳೆಗಾಲದಲ್ಲಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಶಾಸಕ ಡಾ.ಮಂತರ್ ಗೌಡ ಅವರು ಕಾಮಗಾರಿಗೆ ಅನುದಾನದ ಭರವಸೆ ನೀಡಿದ್ದರು. ಇದೀಗ 50 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ.

ಇದೇ ವೇಳೆ ನಗರದ ಗೌಳಿಬೀದಿಯ ನೂತನ ಕಾಂಕ್ರೀಟ್ ರಸ್ತೆ ಹಾಗೂ ಭಗವತಿ ನಗರದ ಮೂಲಕ ಅಬ್ಬಿಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನೂ ಶಾಸಕರು ನಾಗರಿಕರ ಸಮ್ಮುಖದಲ್ಲಿ ಉದ್ಘಾಟಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮಡಿಕೇರಿ ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿಗಾಗಿ 3.5 ಕೋಟಿ ರೂ. ಅನುದಾನ ದೊರೆತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಮಡಿಕೇರಿಯನ್ನು ರಾಜ್ಯದಲ್ಲೇ ಮಾದರಿ ನಗರವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ನಗರಸಭಾ ಸದಸ್ಯೆ ಉಷಾ ಕಾವೇರಪ್ಪ, ನಗರಸಭೆ ಆಯುಕ್ತ ಎಚ್.ಆರ್. ರಮೇಶ್, ಎಂಜಿನಿಯರ್‌ಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Exit mobile version