SIR ವೇಳೆ ವಲಸಿಗರ ದ್ವಿತೀಯ ಮತದಾರರ ಗುರುತಿನ ಚೀಟಿ ಕುರಿತು ತನಿಖೆಗೆ ಮನವಿ

ಮಡಿಕೇರಿ, ಜುಲೈ 6: ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕೇರಳ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಮೂಲದ ಕೆಲ ವಲಸಿಗರು ತಮ್ಮ ಮೂಲ ರಾಜ್ಯಗಳಲ್ಲಿಯೂ ಹಾಗೂ ಕರ್ನಾಟಕದಲ್ಲಿಯೂ ಮತದಾರರ ಗುರುತಿನ ಚೀಟಿ ಹೊಂದಿರಬಹುದೆಂಬ ಶಂಕೆ ವ್ಯಕ್ತವಾಗಿರುವುದಾಗಿ ಸಾಮಾಜಿಕ ಹೋರಾಟಗಾರ ಪ್ರತೀಕ್ ಪೊನ್ನಣ್ಣ ತಿಳಿಸಿದ್ದಾರೆ.

 

ಈ ಸಂಬಂಧ ಮಾನ್ಯ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಹಾಗೂ ಕೊಡಗು ಜಿಲ್ಲಾಧಿಕಾರಿಗೆ ಪತ್ರ ಬರೆದು ಸಮಗ್ರ ತನಿಖೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ.

 

“ಕೆಲವು ವಲಸಿಗರು ಎರಡು ರಾಜ್ಯಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರಬಹುದೆಂಬ ಮಾಹಿತಿ ಹಾಗೂ ಅನುಮಾನ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿಗೆ ಒಂದೇ ಮತದಾರರ ನೋಂದಣಿ ಇರಬೇಕು. ಎರಡು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದು ಕಾನೂನು ಹಾಗೂ ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಪ್ರತೀಕ್ ಪೊನ್ನಣ್ಣ ತಿಳಿಸಿದ್ದಾರೆ.

 

ಇಂತಹ ಅಕ್ರಮಗಳಿದ್ದರೆ ಅವುಗಳನ್ನು ತಡೆದು, ಅರ್ಹ ಮತ್ತು ನೈಜ ಮತದಾರರ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Exit mobile version