ಪೊನ್ನಂಪೇಟೆ ಶಾಲೆಯ ತಡೆಗೋಡೆ ಕುಸಿತ

ಪೊನ್ನಂಪೇಟೆ : ಕಳೆದ ಎರಡು ದಿನಗಳಿಂದ ಸುರಿದ ಭಾರೀ
ಮಳೆಯ ಪರಿಣಾಮವಾಗಿ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗದ ತಡೆಗೋಡೆಯೊಂದು ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಪರಿಣಾಮ ಅದರ ಸಮೀಪದಲ್ಲೇ ನಿರ್ಮಿಸಲಾಗಿರುವ ಶೌಚಾಲಯಕ್ಕೂ ಧಕ್ಕೆ ಉಂಟಾಗಿದ್ದು, ಅದು ಕೂಡ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಲ್ಲಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಕೆಲವೇ ದಿನಗಳ ಹಿಂದೆ ಶಾಲೆಯ ಪಕ್ಕದಲ್ಲಿರುವ ಖಾಸಗಿ ನಿವೇಶನದಲ್ಲಿ ಕಾಮಗಾರಿ ನಡೆಸುವ ಉದ್ದೇಶದಿಂದ ತಡೆಗೋಡೆಯ ತಳಭಾಗದ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ತೆಗೆದುಹಾಕಲಾಗಿತ್ತು. ಇದರಿಂದ ತಡೆಗೋಡೆಯ ಅಡಿಪಾಯ ದುರ್ಬಲಗೊಂಡಿದ್ದು, ನಿರಂತರ ಮಳೆಯಿಂದ ಮಣ್ಣು ಸಡಿಲವಾಗಿ ಗೋಡೆ ಕುಸಿದಿರುವುದು ಸ್ಥಳದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ ವಿಜಯ್ ಮಾತನಾಡಿ, ಪ್ರಸ್ತುತ ಮಳೆಗಾಲ ಇನ್ನೂ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ಉಳಿದಿರುವ ತಡೆಗೋಡೆಯೂ ಅಪಾಯದ ಸ್ಥಿತಿಯಲ್ಲಿದೆ. ಗೋಡೆ ಸಂಪೂರ್ಣ ಕುಸಿದರೆ ಶಾಲಾ ಕಟ್ಟಡ, ಶೌಚಾಲಯ ಹಾಗೂ ಶಾಲಾ ಆವರಣಕ್ಕೆ ಮತ್ತಷ್ಟು ಹಾನಿಯಾಗುವ ಸಾಧ್ಯತೆ ಇದೆ. ಶಾಲೆಯಲ್ಲಿ ಮಕ್ಕಳು ಸಂಚರಿಸುವ ಪ್ರದೇಶವಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆ ಕುರಿತ ಆತಂಕವೂ ಹೆಚ್ಚಾಗಿದೆ ಎಂದು ಹೇಳಿದರು. ತಡೆಗೋಡೆಯ ಪಕ್ಕದಲ್ಲಿರುವ ಸಾಲು ಶೌಚಾಲಯದ ಅಡಿಪಾಯಕ್ಕೂ ಹಾನಿಯಾಗಿರುವ ಲಕ್ಷಣಗಳು ಕಂಡುಬಂದಿದ್ದು, ಯಾವುದೇ ಕ್ಷಣದಲ್ಲಿ ಅದು ಕುಸಿಯುವ ಸಾಧ್ಯತೆ ಇರುವುದರಿಂದ ಶಾಲಾ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಾತ್ಕಾಲಿಕ ರಕ್ಷಣಾ ಕ್ರಮಗಳೊಂದಿಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಳೆಗಾಲ ಪೂರ್ಣಗೊಳ್ಳುವ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

