ಗಾಂಜಾ ಸೇವನೆ ಆರೋಪ 4 ಜನರನ್ನು ಬಹಿಷ್ಕರಿಸಿದ ಕೊಳಕೇರಿ ಜಮಾಅತ್ ಸಮಿತಿ -ಸಾರ್ವಜನಿಕರಿಂದ ಮೆಚ್ಚುಗೆ
ನಾಪೋಕ್ಲು: ಕೊಳಕೇರಿ ಸುನ್ನಿ ಮುಸ್ಲಿಮ್ ಜಮಾಅತ್ ಸಮಿತಿಯು ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ 4 ಜನರನ್ನು ಊರಿನಿಂದ ಬಹಿಷ್ಕರಿಸಿದ್ದು ಜಮಾಅತ್ ಸಮಿತಿಯ ದಿಟ್ಟ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಂಜಾ ಸೇವನೆ ಆರೋಪವಿರುವ ಜಮಾಅತ್ ಸದಸ್ಯರನ್ನು ಜೂನ್ 20ರಿಂದ ಸೆಪ್ಟೆಂಬರ್ 20ರವರೆಗೆ 3 ತಿಂಗಳು ಊರಿನಿಂದ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.ಈ ಕುರಿತು ಸಮಿತಿಯು ಮಸೀದಿಯಲ್ಲಿ ಅಳವಡಿಸಿದ ನೋಟೀಸ್ ಜಾಲ ತಾಣದಲ್ಲಿ ವೈರಲ್ ಆಗಿದ್ದು ಜಮಾಅತ್ ಸಮಿತಿಯ ನಿರ್ಧಾರಕ್ಕೆ ವ್ಯಾಪಾಕ ಪ್ರಶಂಸೆ ವ್ಯಕ್ತವಾಗಿದ್ದು ಜಿಲ್ಲೆಯ ಎಲ್ಲಾ ಜಮಾಅತ್ ಗಳು ಮಾದಕ ವ್ಯಸನಕ್ಕೆ ಇಂತಹ ಕ್ರಮಕೈಗೊಂಡರೆ ಮಾದಕವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಳಕೇರಿ ಜಮಾಅತ್ ಮಹಾಸಭೆಯ ತೀರ್ಮಾನದಂತೆ ಈ ಕ್ರಮ ಕೈಗೊಂಡಿರುವುದಾಗಿ ಸಮಿತಿ ತಿಳಿಸಿದೆ. ಬಹಿಷ್ಕೃತರೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಒಡನಾಟ ಇಟ್ಟುಕೊಳ್ಳಬಾರದು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ತೀರ್ಮಾನ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ. ಜಮಾಅತ್ ಸಮಿತಿಯು ಮಾದಕ ವಸ್ತು ಸೇವನೆಯು ಸಮಾಜಕ್ಕೆ ಹಾನಿಕಾರಕ ಎಂದು ತಿಳಿಸಿ, ಅಂತಹ ಚಟುವಟಿಕೆಗಳನ್ನು ವಿರೋಧಿಸುವುದಾಗಿ ನೋಟಿಸ್‌ನಲ್ಲಿ ತಿಳಿಸಿದೆ.


