ನಾಪೋಕ್ಲು ಹಲ್ಲೆ ಪ್ರಕರಣ- ಬ್ಲಾಕ್ ಅಧ್ಯಕ್ಷ,ಆತನ ಪುತ್ರ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲು

ಮಡಿಕೇರಿ :ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ಬೇತು ಗ್ರಾಮದ ಹಮೀದ್ ಹಾಗೂ ಅವರ ಕುಟುಂಬದ ಮಹಿಳೆಯರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ಹಲ್ಲೆ ನಡೆಸಿದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಆತನ ಪುತ್ರ ಹಾಗೂ ಮತ್ತೊಬ್ಬ ವ್ಯಕ್ತಿಯ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
ದಿನಾಂಕ 18 -03- 2025ರಂದು ನಾಪೋಕ್ಲು ಬೇತು ಗ್ರಾಮದ ನಿವಾಸಿ ಹಮೀದ್ ಎಂಬುವವರ ಸಹೋದರ ಹಂಸ ಎಂಬವವರು ನೀಡಿದ ದೂರಿನ ಸಂಬಂಧ ಹಮೀದ್ ಸೋದರ ಸಂಬಂಧಿ ಮಹಿಳೆಯರೊಂದಿಗೆ ನಾಪೋಕ್ಲು ಠಾಣೆಗೆ ಭೇಟಿ ನೀಡಿದ್ದರು.ಬಳಿಕ ಮನೆಗೆ ಹಿಂತಿರುಗುವ ವೇಳೆ ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ನಿಂತಿರುವಾಗ ( KA -05 -MM-2022 )ಸಂಖ್ಯೆಯ ಕಾರಿನಲ್ಲಿ ಬಂದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಆತನ ಪುತ್ರ ಮಹಮ್ಮದ್ ಅಲಿ ಹಾಗೂ ಬೇತು ಗ್ರಾಮದ ಕೆ.ಎಚ್. ಅಹಮದ್ ಎಂಬುವವರು ಹಮೀದ್ ಹಾಗೂ ಸೋದರ ಸಂಬಂಧಿ ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ . ಹಲ್ಲೆಯಿಂದ ಗಾಯಗೊಂಡ ಹಮೀದ್ ಹಾಗೂ ಮಹಿಳೆಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಖಿತ್ಸೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯಿಂದ ನೀಡಿದ ಮಾಹಿತಿ ಮೇರೆಗೆ ಆಸ್ಪತ್ರೆಗೆ ತೆರಳಿದ ನಾಪೋಕ್ಲು ಪೊಲೀಸರು ಹಮೀದ್ ಹಾಗೂ ಮಹಿಳೆಯರಿಂದ ಹೇಳಿಕೆ ಪಡೆದು ಎಲ್‌ಪಿಟಿಎನ್ ದಾಖಲಿಸಿ (LPTN 53/2026) ತನಿಖೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸರಿಯಾದ ತನಿಖೆ ನಡೆಸದೆ ಪೊಲೀಸರು ಆರೋಪಿಗಳು ನೀಡಿರುವ ಹೇಳಿಕೆ ಮೇರೆಗೆ ಹಮೀದ್ ಅವರು ನೀಡಿದ ಪುಕಾರಿನ ಮೇಲೆ ದಾಖಲಾಗಿದ್ದ ಎಲ್ ಪಿ ಟಿ ಎನ್ ಮುಕ್ತಾಯಗೊಳಿಸಿದ್ದರು. ಇಸ್ಮಾಯಿಲ್ ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು ರಾಜಕೀಯ ಪ್ರಭಾವದಿಂದ ನನ್ನದೂರಿಗೆ ನ್ಯಾಯ ಸಿಗದೆ ಅನ್ಯಾಯವಾಗಿದೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಮೀದ್ ಅರ್ಜಿಯನ್ನು ಸಲ್ಲಿಸಿದರು. ಹಮೀದ್ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ಕೂಡಲೆ ಪ್ರಕರಣ ದಾಖಲಿಸುವಂತೆ ನಾಪೋಕ್ಲು ಪೊಲೀಸರಿಗೆ ಆದೇಶ ನೀಡಿದ ಮೇರೆಗೆ 16-04-2026ರಂದು ಹಲ್ಲೆ ನಡೆಸಿದ ಆರೋಪಿಗಳಾದ ನಾಪೋಕ್ಲು ಬೇತು ಗ್ರಾಮದ ಕೆ.ಎ.ಇಸ್ಮಾಯಿಲ್,ಆತನ ಪುತ್ರ ಕೆ.ಐ. ಮಹಮ್ಮದ್ ಅಲಿ ಹಾಗೂ ಕೆ.ಎಚ್. ಅಹಮದ್ ಎಂಬುವವರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS )2023 U/S115(2),3(5),126(2),351) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

