ಕಕ್ಕಬ್ಬೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆ ಯಾಗಿದ್ದ ಕೇರಳದ ಮಹಿಳೆ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆ

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕಕ್ಕಬ್ಬೆ ಬಳಿಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಕಕ್ಕಬ್ಬೆ ಬಳಿಯ ಕಬ್ಬಿನಕಾಡುವಿನ ಹೋಂಸ್ಟೇಗೆ ಕೇರಳದಿಂದ ಬಂದ ಶರಣ್ಯ ಗುರುವಾರ ತಡಿಯಂಡ ಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು. 36 ವಷ೯ದ ಶರಣ್ಯ ಒಬ್ಬರೇ ಬಂದಿದ್ದು ಕಾಡಾನೆಗಳ ಹಾವಳಿ ಇರುವ ಸ್ಥಳವಾದರಿಂದ ಹೋಂ ಸ್ಟೇ ಮಾಲೀಕರು ಇತರ ಪ್ರವಾಸಿಗರೊಂದಿಗೆ ಚಾರಣಕ್ಕೆ ಶರಣ್ಯಳನ್ನು ಕಳುಹಿಸಿದ್ದರು. ಮರಳಿ ಬರುವ ಸಂದರ್ಭ ದಾರಿ ತಪ್ಪಿ ಶರಣ್ಯ ನಿಗೂಡವಾಗಿ ನಾಪತ್ತೆಯಾಗಿದ್ದರು. ದಾರಿ ತಪ್ಪಿರುವ ಬಗ್ಗೆ ಹೋಂ ಸ್ಟೇ ಮಾಲೀಕನಿಗೆ ಮಾಹಿತಿ ನೀಡಿದ ಶರಣ್ಯ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಕಳೆದ ಗುರುವಾರದಿಂದ ತಡಿಯಂಡಮೋಳ್ ಬೆಟ್ಟದಲ್ಲಿ ಶರಣ್ಯ ಪತ್ತೆಗಾಗಿ ಸ್ಥಳೀಯರ ಸಹಕಾರದಿಂದ ಪೊಲೀಸ್ ,ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಡ್ರೋನ್ ಹಾಗೂ ಶ್ವಾನದಳದೊಂದಿಗೆ ತೀವ್ರ ಶೋಧ ನಡೆಸಿದರು ಶರಣ್ಯ ಪತ್ತೆಯಾಗಲಿಲ್ಲ. ಶುಕ್ರವಾರ ಹಾಗೂ ಶನಿವಾರ ಬೆಳಿಗ್ಗೆಯಿಂದಲೇ ತಡಿಯಂಡಮೋಳ್ ಬೆಟ್ಟದ ದಟ್ಟ ಕಾಡಿನಲ್ಲಿ ಶರಣ್ಯಳಿಗಾಗಿ 4ತಂಡಗಳನ್ನು ರಚಿಸಿ ಹುಡುಕಾಡಿದರು ಶರಣ್ಯ ಸುಳಿವು ಸಿಗಲಿಲ್ಲ.
ಶರಣ್ಯಳನ್ನು ಪತ್ತೆ ಹಚ್ಚಿ ಕೊಡುವಂತೆ ಶರಣ್ಯ ಪೋಷಕರು ಶಾಸಕ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಪೊನ್ನಣ್ಣ ಮಾಹಿತಿ ನೀಡಿದ್ದರು.ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಾಪತ್ತೆಯಾಗಿರುವ ಶರಣ್ಯಳನ್ನು ಶೀಘ್ರದಲ್ಲಿ ಪತ್ತೆ ಹಚ್ಚುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸೂಚನೆಯನ್ನು ನೀಡಿದ್ದರು. ಹೆಚ್ಚಿನ 40ಮಂದಿಯ 9ತಂಡಗಳನ್ನು ರಚನೆಮಾಡಿ ಭಾನುವಾರ ಬೆಳಿಗ್ಗೆಯಿಂದ ನಕ್ಸಲ್ ನಿಗೃಹದಳ,ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ತಂಡ ಶರಣ್ಯ ಪತ್ತೆ ಕಾರ್ಯಚರಣೆ ಮತ್ತೆ ಮುಂದುವರಿಸಿದ್ದರು. ತೀವ್ರ ಹುಡುಕಾಟ ಕಾರ್ಯಾಚರಣೆ ನಡೆಸಿದ ಬಳಿಕ ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಶರಣ್ಯಳನ್ನು ಸ್ಥಳೀಯ ಕುಡಿಯ ಜನಾಂಗದ ಯುವಕರು ಪತ್ತೆ ಹಚ್ಚಿದ್ದಾರೆ. ಶರಣ್ಯ ನಾಪತ್ತೆಯಾಗಿರುವ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಶರಣ್ಯ ನಾಪತ್ತೆ ಪ್ರಕರಣ ತಿಳಿದು ಕೇರಳದಿಂದ ಪೋಷಕರು,ಸಹೋದರ ಶ್ಯಾಮ್ ಹಾಗೂ ಸಂಬಧಿಕರು ತಡಿಯಂಡಮೊಳ್ ಬೆಟ್ಟಕ್ಕೆ ಪೊಲೀಸರೊಂದಿಗೆ ಪತ್ತೆ ಕಾರ್ಯಕ್ಕಾಗಿ ತೆರಳಿದ್ದರು.ಚಾರಣಕ್ಕೆ ತೆರಳಿದ್ದ ಶರಣ್ಯ ಭಾನುವಾರ ಪತ್ತೆಯಾಗಿದ್ದು ಕುಟುಂಬಸ್ಥರು ಶಾಸಕ ಪೊನ್ನಣ್ಣ ಹಾಗೂ ಅರಣ್ಯ ಪೊಲೀಸ್ ಇಲಾಖೆ ಹಾಗೂ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದ್ದಾರೆ. ಕೇರಳದ ಕ್ಯಾಲಿಕೇಟ್ ನ ನಾದಾಪುರಂ ನಿವಾಸಿ ಯಾಗಿರುವ ಶರಣ್ಯ ಅವಿವಾಹಿತೆಯಾಗಿದ್ದು ಕೊಚ್ಚಿನ್‌ನಲ್ಲಿ ಐಟಿ ಉದ್ಯೋಗಿಯಾಗಿದ್ದರು.ನಾಪತ್ತೆಯಾಗಿರುವ ಶರಣ್ಯ ಪರಿಸರ ಪ್ರೇಮಿ ಕೂಡ ಆಗಿದ್ದು ಈ ಹಿಂದೆ ಹಲವು ಕಡೆಗಳಲ್ಲಿ ಟ್ರಕ್ಕಿಂಗ್ ಗೆ ತೆರಳಿದ್ದರು.ಆದರೆ ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಬರುವ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಲಿಲ್ಲವೆಂದು ಸಹೋದರ ಶ್ಯಾಮ್ ಮಾಹಿತಿ ನೀಡಿದ್ದರು .ಶರಣ್ಯಳಿಗೆ ಯಾವುದೇ ತೊಂದರೆಯಾಗದೆ ಸುರಕ್ಷಿತವಾಗಿ ಶೀಘ್ರ ಮರಳಿ ಬರಲಿ ಎಂದು ಕಕ್ಕಬ್ಬೆ ಯುವಕಪಾಡಿ ಗ್ರಾಮದ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗದವರು ಮಲೆ ತಮ್ಮಚ್ಚ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ತಡಿಯಂಡಮೋಳ್ ಬೆಟ್ಟದಲ್ಲಿ ದಟ್ಟ ಮಳೆ ಮೋಡ ಕವಿದಿದ್ದು ಪೋಲಿಸ್ ಅರಣ್ಯ ಇಲಾಖೆ ಹಾಗು ಸ್ಥಳೀಯರು ಕಡಿದ ಹಾದಿಯಲ್ಲಿ ಸಾಗಿ ಹರಸಾಹಸದಿಂದ ಶರಣ್ಯಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮಣಿಯವರು ಭೇಟಿ ನೀಡಿ ಶರಣ್ಯ ಪತ್ತೆ ಕಾರ್ಯಾಚರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಕೂಡ ಪಡೆದಿದ್ದರು.ಕೊನೆಗೂ ಶರಣ್ಯ ಪತ್ತೆಯಾಗಿದ್ದು ಪೋಲಿಸ್ ಇಲಾಖೆ,ಅರಣ್ಯ ಇಲಾಖೆ ಹಾಗೂ ಸ್ಥಳೀಯರಿಗೆ ಶರಣ್ಯ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.
