

ಮಡಿಕೇರಿ: ಕ್ರಿಸ್ತ ಪೂರ್ವದ ಕೊನೆಯ ಶತಮಾನ ಹಾಗೂ ಕ್ರಿಸ್ತ ಶಕದ ಮೊದಲನೇ ಶತಮಾನದಲ್ಲಿ ಕೊಡಗು, ಕರಾವಳಿ, ಕೇರಳ ಹಾಗೂ ತಮಿಳು ನಾಡಿನ ಧರ್ಮಪುರಿವರೆಗೂ ತನ್ನ ಸಾಮೃಜ್ಯವನ್ನು ಸ್ಥಾಪಿಸಿ ಪ್ರಾಚೀನ ತಮಿಳಗಂ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೊಡಗಿನ ವೀರ ನಣ್ಣನ್ ನ ಕಥೆಗಳ “ಬೆಟ್ಟಗಳ ಒಡೆಯ ನಣ್ಣನ್” ಎಂಬ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ.
ಕೊಡಗಿನ ಉದ್ಯಮಿ ಹಾಗೂ ಸಾಹಿತಿ ನಾಪಂಡ ಮುದ್ದಪ್ಪ ಬರೆದಿರುವ 210 ಪುಟಗಳ “ಬೆಟ್ಟಗಳ ಒಡೆಯ ನಣ್ಣನ್” ಪುಸ್ತಕ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಾಹಿತಿ ನಾಪಂಡ ಮುದ್ದಪ್ಪ “ಕೊಡಗು ನ್ಯೂಸ್”ಗೆ ಮಾಹಿತಿ ನೀಡಿದ್ದಾರೆ. ನಾಪಂಡ ಮುದ್ದಪ್ಪ ಅವರ ಐದನೇ ಕೃತಿ ಇದಾಗಿದ್ದು ಈ ಕೃತಿಯೂ ಕೊಡಗಿನ ವೀರನ ರೋಚಕ ಸತ್ಯ ಕಥೆಯನ್ನು ಹೇಳಲಿದೆ.
ಕೊಡಗಿನ ಪ್ರಾಚೀನ ವೀರ ನಣ್ಣನ್ ಕುರಿತು ತಮಿಳುನಾಡಿನ 25ಕ್ಕೂ ಹೆಚ್ಚು ಶಂಗಂ ಕವಿಗಳು ತಾವು ರಚಿಸಿರುವ ಕಾವ್ಯಗಳಲ್ಲಿ ನಣ್ಣನ್ ಬಗ್ಗೆ ಉಲ್ಲೇಕ ಮಾಡಿದ್ದಾರೆ.
ಕೊಡಗಿನ ವೀರನ ರೋಚಕ ಕಥೆಯಾದಾರಿತ ಕಾದಂಬರಿ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಸಾಹಿತಿ ಮುದ್ದಪ್ಪ ಮಾಹಿತಿ ನೀಡಿದ್ದಾರೆ.

