ಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಆರತಿ ಪೊನ್ನಪ್ಪ
ಕರ್ನಾಟಕದ ಕಾಶ್ಮೀರ ಎಂದೇ ಹೆಸರಾದ ಕೊಡಗು, ಕೇವಲ ತನ್ನ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲದೆ, ಕ್ರೀಡೆಗೂ ಬಲು ಹೆಸರುವಾಸಿಯಾಗಿದೆ. ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಟಗಾರರನ್ನು ದೇಶಕ್ಕೆ ನೀಡಿದ ಪುಟ್ಟ ಜಿಲ್ಲೆ ಕೊಡಗು.
ಕೊಡಗಿನಲ್ಲಿ ಪರಂಪರಾಗತವಾಗಿ ಕ್ರೀಡೆಯು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿ ಬಂದಿದೆ, ಅಂತಹ ಒಂದು ಕುಟುಂಬದಿಂದ ಬಂದ ಆಟಗಾರ್ತಿಯೇ ಆರತಿ. ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಲೋಕದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳಾದ ಪಾರುವಂಗಡ ಪೊನ್ನಪ್ಪ ಹಾಗೂ ನಿರ್ಮಲಾ ಉತ್ತಯ್ಯ ದಂಪತಿಯರ ಪುತ್ರಿ. ಈ ಅಪರೂಪದ ಕ್ರೀಡಾ ಹಿನ್ನೆಲೆಯು ಆರತಿಯವರು ಒಬ್ಬ ಶ್ರೇಷ್ಠ ಚಾಂಪಿಯನ್ ಆಗಿ ಬೆಳೆಯಲು ಅಡಿಪಾಯ ಹಾಕಿಕೊಟ್ಟಿತು. ಮಾಜಿ ಭಾರತದ ನಂಬರ್ ಒನ್ ಆಟಗಾರ್ತಿ ಮತ್ತು ಬಹುಮುಖ ಪ್ರತಿಭೆಯ ಕ್ರೀಡಾಪಟುವಾದ ಇವರು, 1990ರ ದಶಕದುದ್ದಕ್ಕೂ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಧಿಪತ್ಯ ಸ್ಥಾಪಿಸಿದ್ದರು.
ಆರತಿರವರು 1 ಆಗಸ್ಟ್ , 1976 ರಂದು ಕೊಡಗಿನ ತಿತಿಮತಿಯ ಭದ್ರಗೊಳದಲ್ಲಿ ಜನಿಸಿದರು. ಇವರು ಪಾರುವಂಗಡ ಪೊನ್ನಪ್ಪ ಮತ್ತು ನಿರ್ಮಲಾ ಉತ್ತಯ್ಯ (ತಾಮನೆ ಪಾಲೇಕಂಡ) ದಂಪತಿಯ ಪುತ್ರಿ. ಕ್ರೀಡೆಯೇ ಇವರ ಮನೆಯ ಕೇಂದ್ರಬಿಂದುವಾಗಿತ್ತು, ಏಕೆಂದರೆ ಇವರ ಪೋಷಕರಿಬ್ಬರೂ ರಾಷ್ಟ್ರೀಯ ಖ್ಯಾತಿಯ ಕ್ರೀಡಾಪಟುಗಳಾಗಿದ್ದರು. ಅವರ ಪ್ರಭಾವ ಮತ್ತು ಉನ್ನತ ಮಟ್ಟದ ಸ್ಪರ್ಧೆಯ ತಿಳುವಳಿಕೆಯು ಆರತಿಯವರಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ಮೈಗೂಡಿಸಿತು.
*ಶಿಕ್ಷಣ*
ಆರತಿಯವರು ಅವರು ಬೆಂಗಳೂರಿನ ಸೇಕ್ರೆಡ್ ಹಾರ್ಟ್ಸ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ, ನಂತರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಕ್ರೀಡಾ ತರಬೇತಿಯ ಜೊತೆಗೆ ಶಿಕ್ಷಣವನ್ನು ಸಮತೋಲನಗೊಳಿಸುವ ಅವರ ಸಾಮರ್ಥ್ಯಕ್ಕೆ 1997ರ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ‘ಅತ್ಯುತ್ತಮ ಆಲ್-ರೌಂಡರ್’ (Best All-Rounder) ಪ್ರಶಸ್ತಿ ನೀಡಿ ಗೌರವಿಸಲಾಯಿತು.
*ವೃತ್ತಿಜೀವನ*
ಆರತಿರವರ ವೃತ್ತಿಜೀವನವು ವಿವಿಧ ವಯೋಮಾನದ ವಿಭಾಗಗಳಲ್ಲಿ ಅದ್ಭುತ ಯಶಸ್ಸಿನೊಂದಿಗೆ ಪ್ರಾರಂಭವಾಯಿತು. 12 ವರ್ಷದೊಳಗಿನ ಸಬ್-ಜೂನಿಯರ್ಸ್‌ನಿಂದ ಆರಂಭಿಸಿ 14, 16 ಮತ್ತು 18 ವರ್ಷದೊಳಗಿನ ಜೂನಿಯರ್ಸ್ ವಿಭಾಗಗಳವರೆಗೆ ಹಾಗೂ ಮಹಿಳೆಯರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ಅಪರೂಪದ ದಾಖಲೆ ಇವರ ಹೆಸರಿನಲ್ಲಿದೆ.
ಅವರ ವೃತ್ತಿಜೀವನದ ಐತಿಹಾಸಿಕ ಕ್ಷಣವೆಂದರೆ 1996-97ರ ಕಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಗ್ರಾಸ್ ಕೋರ್ಟ್ ಮತ್ತು ಮುಂಬೈನಲ್ಲಿ ನಡೆದ ರಾಷ್ಟ್ರೀಯ ಹಾರ್ಡ್ ಕೋರ್ಟ್ ಚಾಂಪಿಯನ್‌ಶಿಪ್ ಎರಡರಲ್ಲೂ ಸಿಂಗಲ್ಸ್ ಮತ್ತು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. 1992 ರಿಂದ 1998 ರವರೆಗಿನ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಭಾರತದ ಅಪ್ರತಿಮ ನಂಬರ್ ಒನ್ ಆಟಗಾರ್ತಿಯಾಗಿದ್ದರು.
*ಅಂತರಾಷ್ಟ್ರೀಯ ಪಂದ್ಯಗಳು*
ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು ಒಂದು ದಶಕದ ಕಾಲ ಭಾರತದ ರಾಷ್ಟ್ರೀಯ ತಂಡದ ಪ್ರಬಲ ಆಟಗಾರ್ತಿಯಾಗಿದ್ದರು. ನ್ಯೂಜಿಲೆಂಡ್, ಥೈಲ್ಯಾಂಡ್, ಮಲೇಷಿಯಾ ಮತ್ತು ಹಾಂಗ್ ಕಾಂಗ್‌ಗಳಲ್ಲಿ ನಡೆದ ಫೆಡರೇಶನ್ ಕಪ್ (WTA) ಪಂದ್ಯಗಳಲ್ಲಿ ಸತತ ನಾಲ್ಕು ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದರು. ದಕ್ಷಿಣ ಏಷ್ಯಾ ಫೆಡರೇಶನ್ (SAF) ಕ್ರೀಡಾಕೂಟಗಳಲ್ಲಿ ಅವರು ಒಟ್ಟು ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. 1990ರ ಆರಂಭದಲ್ಲೇ ಬೆಲ್ಜಿಯಂನಲ್ಲಿ ನಡೆದ ವಾಲಿಬಿ ಕಪ್ ಮತ್ತು ವಾಲ್ಟರ್ ವಂಡೆವಿಯಲ್ ಓಪನ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಗಮನ ಸೆಳೆದಿದ್ದರು.
*ಪ್ರಶಸ್ತಿಗಳು*
ಬ್ರಸೆಲ್ಸ್‌ನಲ್ಲಿ ಸಿಟಿ ಬ್ಯಾಂಕ್ ಜೂನಿಯರ್ ಓಪನ್ ಗೆದ್ದ ನಂತರ ಅವರಿಗೆ ಗೌರವಾನ್ವಿತ ‘ಬೂರ್ಜ್ವಾ ಸ್ಪೋರ್ಟ್ಸ್ ಟ್ರೋಫಿ ಫಾರ್ ಎಲಿಗನ್ಸ್’ ಪ್ರಶಸ್ತಿ ನೀಡಲಾಯಿತು. ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ 1993 ರಲ್ಲಿ ಅವರಿಗೆ ಪ್ರತಿಷ್ಠಿತ ‘ಏಕಲವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
*ವಿವಾಹ ಮತ್ತು ಕೌಟುಂಬಿಕ ಪರಂಪರೆ*
ವೈಯಕ್ತಿಕ ಜೀವನದಲ್ಲಿ ಆರತಿಯವರು ಅಂತರಾಷ್ಟ್ರೀಯ ಟೆನಿಸ್ ತಾರೆ ಗೌರವ್ ನಾಟೇಕರ್ ಅವರನ್ನು ವಿವಾಹವಾದರು. ಗೌರವ್ ಅವರು ಏಳು ವರ್ಷಗಳ ಕಾಲ ಡೇವಿಸ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದವರು ಮತ್ತು 1994 ರ ಹಿರೋಷಿಮಾ ಏಷ್ಯನ್ ಗೇಮ್ಸ್‌ನಲ್ಲಿ ಡಬಲ್ ಚಿನ್ನದ ಪದಕ ವಿಜೇತರು. ಆರತಿ ಮತ್ತು ಗೌರವ್ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಮೊದಲ ಪುತ್ರ ಆದಿತ್ಯ ಈಗ ಕೆಲಸದಲ್ಲಿದ್ದಾರೆ. ಎರಡನೇ ಪುತ್ರ ಅಂಶುಲ್ ಪ್ರಸ್ತುತ ಟೊರಾಂಟೋ ನ ವಾಟರ್ಲೋ ಯೂನಿವರ್ಸಿಟಿಯಲ್ಲಿ ಪರಿಸರ ಸುಸ್ಥಿರತೆ ಮತ್ತು ವ್ಯವಹಾರ ಅಧ್ಯಯನ ಅಭ್ಯಸಿಸುತ್ತಿದ್ದಾರೆ.
ಇಂದು ಆರತಿಯವರು ಕ್ರೀಡಾಪಟುವಿನ ಜೀವನದಿಂದ ಕ್ರೀಡಾ ನಿರ್ವಹಣೆ ಮತ್ತು ಸಲಹಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ. ಪುಣೆಯಲ್ಲಿ ವಾಸಿಸುತ್ತಿರುವ ಅವರು ‘ನಾಟೇಕರ್ ಸ್ಪೋರ್ಟ್ಸ್ ಅಂಡ್ ಫಿಟ್‌ನೆಸ್’ ನ ತರಬೇತಿದಾರರಾಗಿದ್ದಾರೆ. ಭಾರತೀಯ ಜೂನಿಯರ್ ಫೆಡರೇಶನ್ ಕಪ್ ತಂಡಕ್ಕೆ ಮಾರ್ಗದರ್ಶಕಿಯಾಗಿ ಮತ್ತು ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಅವರು ಭಾರತದಲ್ಲಿ ‘ಪಿಕ್ಲ್‌ಬಾಲ್’ (Pickleball) ಕ್ರೀಡೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಸ ಕ್ರೀಡೆಗಳನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ.
ಕೊಡಗಿನಲ್ಲೂ ಕೂಡ ಪಿಕ್ಲ್‌ಬಾಲ್ ಹಾಗೂ ಟೆನ್ನಿಸ್ ಗೆ ಮುತುವರ್ಜಿ ಕೊಟ್ಟು, ಕೊಡಗಿನ ತೆರೆಯ ಮರೆಯ ಯುವ ಪ್ರತಿಭೆಗಳನ್ನು ಹೊರತರುವಲ್ಲಿ ಶ್ರಮಿಸಬೇಕು ಎಂಬುದು ಕ್ರೀಡಾಭಿಮಾನಿಗಳ ಆಸೆ
ಕ್ರೀಡಾ ವಿಶ್ಲೇಷಣೆ
✍️-ಚೆಪ್ಪುಡೀರ ಕಾರ್ಯಪ್ಪ



