*KODAGUNEWS*
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ಇಂದು ಮಧ್ಯಾಹ್ನ 12 ಗಂಟೆಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ 1911ರ ಜೂನ್ 30ರಂದು ಜನಿಸಿದ ತಿಮ್ಮಕ್ಕ ಅವರು ಚಿಕ್ಕಯ್ಯರನ್ನು ವಿವಾಹವಾಗಿದ್ದರು. ದಂಪತಿಗೆ ಸಂತಾನ ಭಾಗ್ಯ ಲಭಿಸದ ಕಾರಣ, ತಿಮ್ಮಕ್ಕ ಅವರು ಮಕ್ಕಳಿರದ ದುಃಖವನ್ನು ಮರೆಸಿಕೊಳ್ಳಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದರು. ಈ ಸಸಿಗಳೇ ಅವರಿಗೆ “ಸಾಲುಮರದ ತಿಮ್ಮಕ್ಕ” ಎಂಬ ಖ್ಯಾತಿ ನೀಡಿದ್ದಾರೆ.
ಪರಿಸರ ಸಂರಕ್ಷಣೆಯಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ 2019ರಲ್ಲಿ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

