ಮಡಿಕೇರಿ : ದೇವನಹಳ್ಳಿಯಲ್ಲಿ ಪ್ರತಿಭಟನಾನಿರತ ರೈತರು, ರೈತ ಕಾರ್ಮಿಕ ಮುಖಂಡರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ , ಭೂ ಸ್ವಾಧಿನ ಪ್ರಕ್ರಿಯೆಯಿಂದ ಸರಕಾರ ದೂರ ಸರಿಯಬೇಕು ಎಂದು ಆಗ್ರಹಿಸಿ ಸಿಐಟಿಯು ಕೊಡಗು ಜಿಲ್ಲಾ ಘಟಕದ ವತಿಯಿಂದ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘಟನೆಯ ಮುಖಂಡರು ದೇವನಹಳ್ಳಿಯಲ್ಲಿ 1720 ಎಕರೆ ಕೃಷಿ ಭೂಮಿಯನ್ನು ಹಿಂದಿನ ಬಿಜೆಪಿ ಸರಕಾರ ವಶಪಡಿಸಿಕೊಂಡಿತು. ಅಧಿಕಾರಕ್ಕೇರುವ ಮುನ್ನ ರೈತರ ಹೋರಾಟ ಬೆಂಬಲಿಸಿ ಭರವಸೆ ನೀಡಿದ ಸಿದ್ದರಾಮಯ್ಯ ಇದೀಗ ಕಾರ್ಪೊರೇಟ್ ಕಂಪನಿಗಳ ಪರ ವಹಿಸಿದ್ದಾರೆ. ಆ ಮೂಲಕ ಅವರು ರೈತರಿಗೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿದರು.
ಬಿಜೆಪಿ ಸರಕಾರ ತಂದಿದ್ದ ನೀತಿಯನ್ನೇ ಕಾಂಗ್ರೆಸ್ ಸರಕಾರ ಕೂಡ ಮುಂದುವರೆಸುತ್ತಿರುವುದರ ವಿರುದ್ಧ ಹೋರಾಟಕ್ಕೆ ಮುಂದಾದ ರೈತರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಅಲ್ಲದೆ ಕೃಷಿ ಭೂಮಿಯನ್ನು ಹಿಂದೂರಿಗಿಸಲ್ಲ ಎಂದು ಕೂಡ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಿಐಟಿಯು ರಾಜ್ಯಾಧ್ಯಕ್ಷರಾದ ವರಲಕ್ಷ್ಮಿ ಹಾಗೂ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸೇರಿದಂತೆ ಹೋರಾಟಗಾರರನ್ನು ಬಂಧಿಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತ ಪಡಿಸಿದರು.
ಜಿಲ್ಲಾ ಸಂಘಟನೆಯ ಪ್ರಮುಖರಾದ ದುರ್ಗಾ ಪ್ರಸಾದ್, ರಮೇಶ್.ಹೆಚ್.ಬಿ, ಶಾಬು, ಎ. ಮಹದೇವ್, ಅಪ್ಪಾಜಿ, ಕುಟ್ಟಪ್ಪ ಹಾಗೂ ಕಾರ್ಯಕರ್ತರಾದ ಸೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


