ಮಡಿಕೇರಿ : ಆರ್ಸಿಬಿಯ ಗೆಲುವಿನ ವಿಜಯೋತ್ಸವ ಸಂದರ್ಭ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಕರ್ನಾಟಕದ ಜನತೆ ರಾಜ್ಯ ಮತ್ತು ಕನ್ನಡ ಭಾಷೆಯ ಅಭಿಮಾನದಿಂದ ಆರ್ಸಿಬಿ ಗೆಲುವಿಗಾಗಿ ದೇವಾಲಯಗಳಲ್ಲಿ ಪೂಜೆಯನ್ನು ಸಲ್ಲಿಸಿದ್ದಾರೆ. ಆರ್ಸಿಬಿ ತಂಡ ಬರೋಬ್ಬರಿ ೧೮ ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದಿದೆ. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದೆ. ಇಂತಹ ಸಂದರ್ಭ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ರಾಜ್ಯ ಸರ್ಕಾರ ಏಕಾಏಕಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಪರಿಣಾಮ ೧೧ ಅಮಾಯಕ ಜೀವಗಳು ಬಲಿಯಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ. ಆದ್ದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗ್ರಹಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇಂದು ರಾಜ್ಯ ಸರ್ಕಾರ ಯಾವುದೇ ಯೋಜನೆ, ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ಮಾಡುತ್ತಿಲ್ಲ. ಏಕಾಏಕಿ ನಿರ್ಧಾರ ಮಾಡಿ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ದೂರಿದ ಅವರು, ಕ್ರಿಕೆಟ್ ಪಂದ್ಯಾಟದಲ್ಲಿ ಜಯಶೀಲರಾದವರನ್ನು ಅಭಿನಂದಿಸುವುದು ಸರ್ಕಾರದ ಕರ್ತವ್ಯ. ಆದರೆ, ಕಾರ್ಯಕ್ರಮಕ್ಕೂ ಮುನ್ನ ಸಾಧಕ-ಬಾಧಕವನ್ನು ಅರಿತುಕೊಳ್ಳಬೇಕು. ವ್ಯವಸ್ಥಿತವಾಗಿ ರೂಪುರೇಷೆಗಳನ್ನು ರೂಪಿಸಬೇಕು. ಇವುಗಳನ್ನು ಮಾಡದೇ ೧೧ ಅಮಾಯಕರ ಬಲಿಗೆ ಕಾರಣವಾಗಿದೆ ಎಂದು ದೂರಿದರು.
ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಂದಿಗೂ ಅನ್ಯಾಯದ ವಿರುದ್ಧವಾಗಿದೆ. ಆದರೆ, ರಾಜ್ಯದಲ್ಲಿ ಸಾಲುಸಾಲು ಸರಣಿ ಕೊಲೆಯಾಗುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳದೇ, ಒಂದು ಕೋಮಿನವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಇದರ ಭಾಗವಾಗಿ ಮಂಗಳೂರಿನಲ್ಲಿ ಹಿಂದೂ ನಾಯಕರ ಗಡಿಪಾರಿಗೆ ಆದೇಶ ನೀಡಿರುವುದಾಗಿದೆ. ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಒಂದು ನ್ಯಾಯ ಎನ್ನುವಂತಾಗಿದೆ ಎಂದರು.
ವಿಧಾನ ಪರಿಷತ್ತು ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಯಾವುದೇ ಕಾರ್ಯಕ್ರಮಕ್ಕೂ ಮೊದಲು ಭದ್ರತೆ ಸರಿಪಡಿಸಿಕೊಳ್ಳಬೇಕು. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಮತ್ತು ಡಿಕೆಶಿ ಅವರು ಸಿಎಂ ಆಗುವ ಆತುರದಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ. ಇವರ ಕಿತ್ತಾಟದಲ್ಲಿ ಅಮಾಯಕ ಜೀವಗಳು ಬಲಿಯಾಗಿದೆ ಎಂದು ಆರೋಪಿಸಿದ ಅವರು, ಇದೇ ರೀತಿ ತುಮಕೂರಿನಲ್ಲಿ ನೀರಿನ ಗಲಾಟೆ, ಮಂಗಳೂರಿನಲ್ಲಿ ಕೋಮುಗಲಭೆಯನ್ನು ಸರ್ಕಾರ ಸೃಷ್ಠಿ ಮಾಡುತ್ತಿದೆ. ಪರಿಣಾಮ ರಾಜ್ಯವೇ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಇಂದು ಸಿಎಂ ಸ್ಥಾನ ಕೂಡ ದುರ್ಬಲವಾಗಿದೆ. ಆದ್ದರಿಂದ ಸಿಎಂ, ಡಿಸಿಎಂ, ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರನ್ನು ಆಡಳಿತಕ್ಕೆ ತನ್ನಿ ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಈ ಹಿಂದೆ ಆಂದ್ರಪ್ರದೇಶದಲ್ಲಿ ಅಲ್ಲುಅರ್ಜುನ್ ಅವರ ಸಂಭ್ರಮಾಚರಣೆ ಸಂದರ್ಭ ಕಾಲ್ತುಳಿತಕ್ಕೆ ಜನರು ಬಲಿಯಾಗಿದ್ದರು. ಈ ಸಂದರ್ಭ ಕಾರ್ಯಕ್ರಮ ಆಯೋಜಿಸಿದ್ದ ಅವರನ್ನೇ ಬಂಧಿಸಲಾಗಿತ್ತು. ಇಂದು ರಾಜ್ಯ ಸರ್ಕಾರವೇ ಕಾರ್ಯಕ್ರಮ ಆಯೋಜಿಸಿದೆ. ಅವರೇ ನೇರ ಹೊಣೆಯಾಗಿದ್ದಾರೆ. ಆದ್ದರಿಂದ ಕಾರ್ಯಕ್ರಮ ಆಯೋಜಕರೇ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಕ್ತಾರರಾದ ಅರುಣ್ಕುಮಾರ್, ತಳೂರು ಕಿಶೋರ್ ಕುಮಾರ್, ಪ್ರಮುಖರಾದ ಉಮೇಶ್ ಸುಬ್ರಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.


