ಕರಿಕೆ: ಕೊಡಗಿನ ಕರಿಕೆ ಸಮೀಪದ ಕೇರಳ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿದ ಆರೋಪದ ಮೇಲೆ ಓರ್ವನನ್ನು ಕಾಸರಗೋಡು ವಲಯ ಅರಣ್ಯ ಇಲಾಖೆ ಬಂಧಿಸಿದೆ.
ಕರಿಕೆ ಸಮೀಪದ ಗೇರು ತೋಟಿನ ಕಾಟೂರು ಕೊಪ್ಪು ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಕರಿಕೆ ತೋಟಮ್ ನಿವಾಸಿ ಸಿದ್ದು ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ವಿನೀಶ್ ಹಾಗೂ ವಿಮಲ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತನಿಂದ ಒಂದು ನಾಡ ಬಂದೂಕು, ಸುಮಾರು 40 ಕೆ.ಜಿ. ಕಡವೆ ಮಾಂಸ ಹಾಗೂ ಬೇಟೆಗೆ ಬಳಸಿದ ಇತರ ವಸ್ತುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಕೇರಳ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಬೇಟೆ ನಡೆಸಿರುವ ಕುರಿತು ದೊರೆತ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

