




ಮಡಿಕೇರಿ ಕೈಗಾರಿಕಾ ಬಡಾವಣೆಯ ರಾಜರಾಜೇಶ್ವರಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರ ಆಕ್ರೋಶ; ನಗರಸಭೆ ಅಧಿಕಾರಿಗಳ ಭೇಟಿ
ಮಡಿಕೇರಿ: ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯ ಸಿಬ್ಬಂದಿಗಳು ರಸ್ತೆಯ ಬದಿಯಲ್ಲಿ ಮದ್ಯದ ಖಾಲಿ ಬಾಟಲಿಗಳಿದ್ದ ಬಾಕ್ಸ್‌ಗಳನ್ನು ಎಸೆದಿರುವ ಆರೋಪ ಕೇಳಿಬಂದಿದೆ.
ಮಡಿಕೇರಿಯ ಸಂಪಿಗೆಕಟ್ಟೆ ರಸ್ತೆಯ ಬದಿಯಲ್ಲಿ ಮದ್ಯದ ಖಾಲಿ ಬಾಟಲಿಗಳಿದ್ದ ಬಾಕ್ಸ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳೇ ಈ ಬಾಕ್ಸ್‌ಗಳನ್ನು ರಸ್ತೆಯ ಬದಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾಕ್ಸ್ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ನವೀನ್ ಕುಮಾರ್ ಅವರೊಂದಿಗೆ ಮಾತಿನ ಚಕಮಕಿ ನಡೆದಿರುವುದಾಗಿ ತಿಳಿದುಬಂದಿದೆ. ಈ ವೇಳೆ ಆಸ್ಪತ್ರೆ ಮುಖ್ಯಸ್ಥರಿಂದ ಉಡಾಫೆಯ ಉತ್ತರ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ನಡುವೆ ದೂರವಾಣಿ ಮೂಲಕ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ.
ಆಸ್ಪತ್ರೆಯಂತಹ ಜವಾಬ್ದಾರಿಯುತ ಸಂಸ್ಥೆಯ ಸಿಬ್ಬಂದಿಗಳೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಸರಿಯೇ? ಎಂಬ ಪ್ರಶ್ನೆಯನ್ನು ಸ್ಥಳೀಯರು ಮುಂದಿಟ್ಟಿದ್ದು, ನಗರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

