ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
ಮಡಿಕೇರಿ: ಮಡಿಕೇರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ₹2 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರ ನೇತೃತ್ವದಲ್ಲಿ ನಗರ ದಸರಾ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಮಡಿಕೇರಿ ದಸರಾ ಉತ್ಸವದ ಸಿದ್ಧತೆ ಹಾಗೂ ಉತ್ಸವದ ಯಶಸ್ವಿ ಆಯೋಜನೆಗಾಗಿ ಸರ್ಕಾರದಿಂದ ಅನುದಾನ ನೀಡುವಂತೆ ಮನವಿ ಮಾಡಿತು.
ನಿಯೋಗದ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ನಗರ ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬೀತ, ಕಾರ್ಯದರ್ಶಿ ಮುದ್ದುರಾಜ್, ದಸರಾ ವೇದಿಕೆ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆರ್.ಪಿ., ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚಾರ್, ಯುವ ದಸರಾ ಅಧ್ಯಕ್ಷ ಕವನ ಕೊತ್ತೊಳಿ, ದಶಮಂಟಪ ಸಮಿತಿ ಅಧ್ಯಕ್ಷ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ವಿನೋದ್ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ಮೋಹನ್, ಗಜೇಂದ್ರ, ಜಗದೀಶ್ ಸೇರಿದಂತೆ ದಸರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಅನುದಾನದಿಂದ ಈ ಬಾರಿಯ ಮಡಿಕೇರಿ ದಸರಾ ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲು ಅನುಕೂಲವಾಗಲಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

