ಮಡಿಕೇರಿ -ಹಿರಿಯರು ಸಂತಸದಿಂದ ಇರುವ ಮನೆ ಹಾಗೂ ಸಮಾಜ ಉತ್ತಮವಾಗಿರಲು ಸಾಧ್ಯ. ಆದ್ದರಿಂದ ಹಿರಿಯರನ್ನು ಗೌರವಿಸುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದರು.
ಭಾರತೀಯ ಸಂಸ್ಕøತಿಯಲ್ಲಿ “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ” ಎಂಬ ಉದಾತ್ತ ಪರಂಪರೆಯಿದೆ. ಹಿರಿಯರಿಗೆ ದೊರೆಯಬೇಕಾದ ಆಸ್ತಿ ಹಕ್ಕುಗಳು ಮತ್ತು ನಿರ್ವಹಣಾ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಇಂದಿನ ಜೆನ್ ಝಿ ಯುವ ಪೀಳಿಗೆಗೆ ಕೇವಲ ಉಪದೇಶ ಅಥವಾ ಭಾಷಣಗಳ ಮೂಲಕ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಅವರ ಮನೋಭಾವವನ್ನು ಅರ್ಥಮಾಡಿಕೊಂಡು, ಸೂಕ್ತ ವಿಧಾನಗಳ ಮೂಲಕ ಸಂವಹನ ನಡೆಸಬೇಕು. ಹಿರಿಯರ ಅನುಭವ ಮತ್ತು ಅವರು ತೋರಿಸಿಕೊಟ್ಟ ಮಾರ್ಗದ ಮಹತ್ವವನ್ನು ಯುವಜನರು ಅರಿತುಕೊಳ್ಳಬೇಕು ಎಂದು ಹೇಳಿದರು.
ಮಡಿಕೇರಿ ಮಹಿಳಾ ಠಾಣೆಯ ಸಿಪಿಐ ಉಮೇಶ್ ಕುಮಾರ್ ಅವರು ಮಾತನಾಡಿ, ಹಿರಿಯ ನಾಗರಿಕರ ಸುರಕ್ಷತೆ ಮತ್ತು ರಕ್ಷಣೆಗೆ ಪೆÇಲೀಸ್ ಇಲಾಖೆ ವತಿಯಿಂದ ಬೀಟ್ ವ್ಯವಸ್ಥೆಯ ಮೂಲಕ ನಿಗಾ ವಹಿಸಲಾಗುತ್ತಿದ್ದು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಪೆÇಲೀಸ್ ನೆರವು ಪಡೆಯಬಹುದು ಎಂದು ತಿಳಿಸಿದರು.
ವಕೀಲರಾದ ಮೀನಾ ಕುಮಾರಿ ಅವರು ಮಾತನಾಡಿ ಕಾನೂನು ಅನುಷ್ಠಾನದಲ್ಲಿ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಮಾತನಾಡಿ, ಹಿರಿಯ ನಾಗರಿಕರ ಪಾಲನೆ, ಪೆÇೀಷಣೆ ಮತ್ತು ನಿರ್ವಹಣೆ ಮಾಡುವುದು ಮಕ್ಕಳ ಕಾನೂನುಬದ್ಧ ಜವಾಬ್ದಾರಿಯಾಗಿದೆ. ನಿರ್ವಹಣೆ ಎಂದರೆ ಕೇವಲ ಊಟ ನೀಡುವುದು ಮಾತ್ರವಲ್ಲ, ಹಿರಿಯ ನಾಗರಿಕರಿಗೆ ಅಗತ್ಯವಾದ ಬಟ್ಟೆ, ಸುರಕ್ಷಿತ ವಸತಿ, ವೈದ್ಯಕೀಯ ಆರೈಕೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸುವುದೂ ಇದರ ಭಾಗವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಮಂಗಲಾ ಜಿ.ಹಿರೇಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. ಹಿರಿಯ ನಾಗರಿಕರಾದ ಸುನಂದ ಪ್ರಾರ್ಥಿಸಿದರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಸ್ವಾಗತಿಸಿದರು, ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿ, ವಂದಿಸಿದರು.



