ಮಡಿಕೇರಿಯಲ್ಲಿ ದಸರಾ ಶುಭಾಶಯದ ಫ್ಲೆಕ್ಸ್ಗೆ ಹಾನಿ ಆರೋಪ: ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು
ಮಡಿಕೇರಿ: ಅ.27: ಮಡಿಕೇರಿ ದಸರಾ ಸಮಿತಿಯ ವತಿಯಿಂದ ಶುಭಾಶಯ ಕೋರಿ ಅಳವಡಿಸಲಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಭಾವಚಿತ್ರವಿದ್ದ ಫ್ಲೆಕ್ಸ್ ಬ್ಯಾನರ್ಗೆ ಬಿಜೆಪಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಅ.26ರಂದು ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ಬ್ಯಾನರ್ಗೆ ಹಾನಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಈ ಕೃತ್ಯವನ್ನು ಖಂಡಿಸಿ ಅ.27ರಂದು ಪೊಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ಮುಖಂಡರು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎ. ಹಂಸ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿಜೆ ಮೋಹನ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ನಗರ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ದಿನೇಶ್, ಮುಖಂಡರಾದ ಯಶ್ ಧೋಲ್ಪಾಡಿ, ಪ್ರಭು ರೈ, ಮಡಿಕೇರಿ ಮಹಿಳಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ, ನಗರ ಉಪಾಧ್ಯಕ್ಷರಾದ ಮುನೀರ್ ಮಾಚಾರ್, ಮಿನಾಸ್ ಪ್ರವೀಣ್, ಮಡಿಕೇರಿ ಯುವ ಘಟಕದ ಅಧ್ಯಕ್ಷ ಅರ್ಜುನ್ ಸೂರಿ, ಉಪಾಧ್ಯಕ್ಷ ಅನ್ಫಲ್ ಸೇರಿದಂತೆ ಲೀಲಾ, ಶೇಷಮ್ಮ, ಪೊನ್ನಕ್ಕ, ಧನಲಕ್ಷ್ಮಿ, ವಸಂತ ಭಟ್, ರವಿ ಪಾಪು, ನಜೀರ್ ಹುಸೇನ್, ಹಯಾತ್, ಹಬೀಬ್, ಸುಬ್ರಮಣಿ, ನಿರಂಜನ್ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



