
ಪ್ರತಿವರ್ಷ ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಕಾವೇರಿಯಲ್ಲಿ ನಡೆಯುವ ಪವಿತ್ರ ತೀರ್ಥೋದ್ಭವಕ್ಕೆ ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಧಾರ್ಮಿಕ ಆಚರಣೆಗಳು ಮತ್ತು ಹಬ್ಬದ ಸಂಭ್ರಮ ಮನೆಮಾಡಿರುತ್ತದೆ. ಇಂತಹ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ.
ಕಳೆದ ಬಾರಿಯೂ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿಯೂ ತುಲಾ ಸಂಕ್ರಮಣ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಕೊಡಗು ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇವಲ ತಲಕಾವೇರಿ ಮತ್ತು ಭಾಗಮಂಡಲ ಸುತ್ತಮುತ್ತಲಿನ ಪ್ರದೇಶಗಳಿಗೆ ಸೀಮಿತಗೊಳಿಸದೆ, ಇಡೀ ಕೊಡಗು ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸುವ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಮನವಿಯನ್ನು ಪರಿಗಣಿಸಿ ಜಿಲ್ಲಾಡಳಿತ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.


