ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿ

ಕಸ ವಿಲೇವಾರಿ, ವಸತಿ, ವನ್ಯಜೀವಿ ಸಂಘರ್ಷದ ಬಗ್ಗೆ ಅಸಮಾಧಾನ

ಮಡಿಕೇರಿ: ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಿ, ನಿರ್ಲಕ್ಷ್ಯ ವಹಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಡಿಕೇರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ವಿಬಿ-ಜಿ ರಾಮ್ ಜಿ, ಜಲಜೀವನ್ ಮಿಷನ್, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಮಡಿಕೇರಿ ನಗರದ ಕಸ ವಿಲೇವಾರಿ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡುಬರದಿರುವುದಕ್ಕೆ ಯದುವೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಟೆಂಡರ್‌ದಾರರು ಮುಂದೆ ಬರುತ್ತಿಲ್ಲ ಎಂಬ ನಗರಸಭೆ ಅಧಿಕಾರಿಗಳ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕೂಡ ತ್ವರಿತ ಕ್ರಮದ ಭರವಸೆ ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಬಡವರಿಗೆ ಮನೆ ಹಾಗೂ ನಿವೇಶನ ಒದಗಿಸುವಂತೆ ಸೂಚಿಸಿದ ಸಂಸದರು, ಯೋಜನೆ ಅನುಷ್ಠಾನದಲ್ಲಿ ರಾಜಕೀಯ ಮಾಡದೆ ಅರ್ಹರಿಗೆ ಸೌಲಭ್ಯ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಮಸ್ಯಾತ್ಮಕ ಕಾಡಾನೆಗಳನ್ನು ಸ್ಥಳಾಂತರಿಸುವುದು, ರೈಲ್ವೆ ಬ್ಯಾರಿಕೇಡ್ ಹಾಗೂ ಟ್ರಂಚ್‌ಗಳ ಮಾಹಿತಿ ಸಂಗ್ರಹಿಸುವುದು ಮತ್ತು ವನ್ಯಜೀವಿಗಳಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಲಾಯಿತು.

ಕೊಡಗಿನಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಕೃಷಿ, ಆರೋಗ್ಯ, ವಿದ್ಯುತ್ ಸಂಪರ್ಕ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಪ್ರವಾಸೋದ್ಯಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಸಮಿತಿ ಸದಸ್ಯರಾದ ಆರ್.ಕೆ.ಚಂದ್ರು, ನಾಗೇಶ್ ಕುಂದಲ್ಪಾಡಿ, ಡಾ.ನವೀನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version