ಮಾಣಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಮಡಿಕೇರಿ ಮೂಲದ ಮಹಿಳೆ ಮೃತ್ಯು

ವಿಟ್ಲ: ಮಾಣಿ ಫ್ಲೈಓವರ್ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿಕೇರಿ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಳೀರ ಬಳಿ ಫ್ಲೈಓವರ್ ಆರಂಭವಾಗುವ ರಸ್ತೆಯಲ್ಲಿ ಆಲ್ಟೋ ಕಾರು ಹಾಗೂ ಟೆಂಪೋ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಘಟನೆ ನಡೆದಿದೆ.

ಮೃತರನ್ನು ಮಡಿಕೇರಿ ನಿವಾಸಿ ನಫೀಸಾ (55) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದು, ನಾಲ್ವರು ಮಹಿಳೆಯರು ಇದ್ದರು ಎನ್ನಲಾಗಿದೆ. ಉಮ್ರಾ ತರಗತಿ ಮುಗಿಸಿಕೊಂಡು ಕುಟುಂಬ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ವಿಸ್ ರಸ್ತೆ ಅವ್ಯವಸ್ಥೆ ವಿರುದ್ಧ ಸ್ಥಳೀಯರ ಆಕ್ರೋಶ

ಹಳೀರ ಬಳಿ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಪ್ರವೇಶಿಸುವ ಸರ್ವಿಸ್ ರಸ್ತೆ ಕಿರಿದಾಗಿದ್ದು, ವಾಹನ ಸವಾರರಿಗೆ ಸರಿಯಾಗಿ ಗೋಚರಿಸುವುದಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.

ಹೊರಗಿನಿಂದ ಬರುವ ವಾಹನ ಸವಾರರಿಗೆ ಸರ್ವಿಸ್ ರಸ್ತೆಯ ಪ್ರವೇಶದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಸೂಚನಾ ಫಲಕಗಳ ಕೊರತೆಯೂ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Exit mobile version