ಜೀವನ್ಮರಣ ಹೋರಾಟದಲ್ಲಿ ಬಸವರಾಜು: ಬದುಕುಳಿಯಲಿ ಎಂದು ಪ್ರಾರ್ಥನೆ
ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಚಿಕಿತ್ಸೆ
ವಿರಾಜಪೇಟೆಯಲ್ಲಿ ಶುಕ್ರವಾರ ನಡೆದ ಗೌರಿ-ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಸಂಭವಿಸಿದ ವಿದ್ಯುತ್ ಅವಘಡ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಅಲಂಕಾರಿಕ ಮಂಟಪಕ್ಕೆ ವಿದ್ಯುತ್ ಸ್ಪರ್ಶಿಸಿ ನಾಲ್ವರು ಗಾಯಗೊಂಡಿದ್ದು, ಅವರಲ್ಲಿ ಬಸವರಾಜು ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಶೇ.70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಸವರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸುಟ್ಟ ಗಾಯಗಳಿಂದಾಗಿ ಉಸಿರಾಟಕ್ಕೂ ತೀವ್ರ ತೊಂದರೆ ಎದುರಾಗಿದ್ದು, ವೈದ್ಯರು ಅವರ ಆರೋಗ್ಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರದ ಶೋಭಾಯಾತ್ರೆಯಲ್ಲಿ ಸುಮಾರು 22 ಅಡಿ ಎತ್ತರದ ಅಲಂಕಾರಿಕ ಮಂಟಪದ ಮೇಲ್ಭಾಗದಲ್ಲಿದ್ದ ಸ್ಪೀಕರ್ ಬಳಿ ಯುವಕರು ಕುಳಿತಿದ್ದರು. ಈ ವೇಳೆ ವಿದ್ಯುತ್ ತಂತಿ ಮಂಟಪಕ್ಕೆ ತಾಗಿದ್ದು, ಅದನ್ನು ಕೈಯಿಂದ ಸರಿಸಲು ಪ್ರಯತ್ನಿಸಿದ ಸಂದರ್ಭ ವಿದ್ಯುತ್ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸ್ಥಳೀಯರ ಪ್ರಕಾರ, 11 ಕೆ.ವಿ. ವಿದ್ಯುತ್ ಲೈನ್ ಆಫ್ ಆಗಿದ್ದರೂ, ಅರ್ಥಿಂಗ್ನಿಂದ ವಿದ್ಯುತ್ ಪ್ರವಹಿಸಿರುವುದು ಅವಘಡಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಖರ ಕಾರಣವನ್ನು ಪರಿಶೀಲಿಸಬೇಕಿದೆ.
ಒಂದೆಡೆ ಹಬ್ಬದ ಸಂಭ್ರಮ, ಮತ್ತೊಂದೆಡೆ ಕ್ಷಣಾರ್ಧದಲ್ಲಿ ಸಂಭವಿಸಿದ ದುರಂತ… ಇದೀಗ ಆಸ್ಪತ್ರೆಯಲ್ಲಿರುವ ಬಸವರಾಜು ಅವರಿಗಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.
ಮೈಸೂರಿನ ಆಸ್ಪತ್ರೆಯಲ್ಲಿ ವೈದ್ಯರ ನಿರಂತರ ಚಿಕಿತ್ಸೆಯ ನಡುವೆ ಬಸವರಾಜು ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರು ಈ ಸಂಕಷ್ಟದಿಂದ ಪಾರಾಗಿ ಗುಣಮುಖರಾಗಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.


