
ಸೆಪ್ಟೆಂಬರ್ 4ರಂದು ಅರಣ್ಯ ಘಟಕ ಮಡಿಕೇರಿಯ ಪೊಲೀಸ್ ಅಧೀಕ್ಷಕರಾದ ಪವನ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ದಳ ಸಾಗರದ ಪಿಎಸ್ಐ ವಿನಾಯಕ ಹಾಗೂ ಸಿಬ್ಬಂದಿಗಳು ಹೊಸನಗರದ ರಿಪ್ಪನ್ಪೇಟೆ ವ್ಯಾಪ್ತಿಯ ಬರುವೆ ರಸ್ತೆ ಬಳಿ ದಾಳಿ ನಡೆಸಿದರು.
ಈ ವೇಳೆ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 21 ಕೆಜಿ ಜಿಂಕೆ ಮಾಂಸ ಪತ್ತೆಯಾಗಿದ್ದು, ಮಾಂಸ ಹಾಗೂ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವೆ ನಿವಾಸಿ ಗುರುರಾಜ್ (ನರಸಿಂಹನಾಯ್ಕ ಪುತ್ರ) ಹಾಗೂ ಕಡಡಿಗ ನಿವಾಸಿ ಗಣೇಶ್ (ಗೋಪಾಲ ಪುತ್ರ) ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ದಾಳಿ ವೇಳೆ ಇಬ್ಬರೂ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ, ಸುರೇಶ್, ಪ್ರಮೋದಿನಿ ಹಾಗೂ ಎಚ್.ಬಿ. ರುಕ್ಮಿಣಿ ಪಾಲ್ಗೊಂಡಿದ್ದರು.


