ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಅರಣ್ಯ ಸಚಿವರ ಗಮನ ಸೆಳೆದ ಪೊನ್ನಣ್ಣ
ಮಾನವ–ವನ್ಯಜೀವಿ ಸಂಘರ್ಷ, ಜಮ್ಮಾಬಾಣೆ ಸಮಸ್ಯೆ ಕುರಿತು ವಿಸ್ತೃತ ಚರ್ಚೆ; ಆ.28ರಂದು ಕೊಡಗು ಭೇಟಿ ಸಾಧ್ಯತೆ
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ತೀವ್ರವಾಗುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು.
ಕೊಡಗು ಜಿಲ್ಲೆ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ವನ್ಯಜೀವಿ ಹಾವಳಿ, ಮಾನವ–ವನ್ಯಜೀವಿ ಸಂಘರ್ಷದಿಂದ ಜನರು ಅನುಭವಿಸುತ್ತಿರುವ ಸಂಕಷ್ಟ ಹಾಗೂ ಜಮ್ಮಾಮಲೆ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಚಿವರಿಗೆ ಪೊನ್ನಣ್ಣ ಅವರು ಸಂಪೂರ್ಣ ಮಾಹಿತಿಯನ್ನು ನೀಡಿದರು.
ವನ್ಯಜೀವಿಗಳ ಹಾವಳಿಯಿಂದ ಜನರು ಹಾಗೂ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಚಿವರಿಗೆ ಮನವಿ ಮಾಡಿದರು.
ಶಾಸಕರ ಮನವಿಗೆ ಸ್ಪಂದಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು, ವಿಧಾನಸಭಾ ಅಧಿವೇಶನದ ಕಲಾಪ ಮುಗಿದ ಬಳಿಕ ಕೊಡಗು ಜಿಲ್ಲೆಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳ ಕುರಿತು ಸ್ಥಳೀಯವಾಗಿ ಪರಿಶೀಲನೆ ನಡೆಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಬಹುತೇಕ ಆಗಸ್ಟ್ 28ರಂದು ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡುವ ನಿರೀಕ್ಷೆ ಇದ್ದು, ಈ ವೇಳೆ ಜಿಲ್ಲೆಯ ಪ್ರಮುಖ ಅರಣ್ಯ ಹಾಗೂ ವನ್ಯಜೀವಿ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಜಮ್ಮಾಮಲೆ ಅಧ್ಯಕ್ಷ ಪೆಮ್ಮಯ್ಯ, ನಿರ್ದೇಶಕರಾದ ಚಿನ್ನಪ್ಪ, ಪೂವಯ್ಯ, ಸೋಮಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


