ವಿರಾಜಪೇಟೆಯ 11 ಗ್ರಾಮಗಳಲ್ಲಿ ಸೆಕ್ಷನ್ 144 ಜಾರಿ
ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಹಿನ್ನೆಲೆ ಮುನ್ನೆಚ್ಚರಿಕೆ; ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ನಿರ್ಬಂಧ
ವಿರಾಜಪೇಟೆ: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿರಾಜಪೇಟೆ ತಾಲ್ಲೂಕಿನ 11 ಗ್ರಾಮಗಳ ವ್ಯಾಪ್ತಿಯಲ್ಲಿ ಇಂದು (ಆ.18) ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅನ್ವಯ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಕಾವಡಿ, ಹಬ್ಬಿನಾಡು, ಬೇರಂಬಾಡ, ಕಣ್ಣಂಗಾಲ, ಹಾಲುಗುಂದ, ಯಡೂರು, ಚಿಕ್ಕನಳ್ಳಿ, ಗುಂಡ, ಪುಲಿಯೇರಿ, ಅಮತ್ತಿ ಹಾಗೂ ಕರಡಿಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಈ ನಿರ್ಬಂಧ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಚಲನವಲನದ ಮೇಲೆ ನಿಗಾ ವಹಿಸಿ, ನಾಡಿಗೆ ಬಂದಿರುವ ಆನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸುವ ಕಾರ್ಯಾಚರಣೆ ನಡೆಸಲಿದ್ದಾರೆ. ಕಾರ್ಯಾಚರಣೆಯ ವೇಳೆ ಸಾರ್ವಜನಿಕರು ಸ್ಥಳಕ್ಕೆ ತೆರಳಿ ಆನೆಗಳನ್ನು ಹಿಂಬಾಲಿಸುವುದು ಅಥವಾ ಗುಂಪುಗೂಡುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಧಾರ್ಮಿಕ ಸಿಡಿಮದ್ದು, ಪಟಾಕಿ ಸಿಡಿಸುವುದು, ಗುಂಡು ಹಾರಿಸುವುದು, ಮೆರವಣಿಗೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಮದ್ಯ ಮಾರಾಟ ಮತ್ತು ಸೇವನೆ ಸೇರಿದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಬಹುದಾದ ಚಟುವಟಿಕೆಗಳಿಗೂ ನಿರ್ಬಂಧವಿದೆ.
ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಡಳಿತ ಎಚ್ಚರಿಕೆ ನೀಡಿದ್ದು, ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.
ಆ.18ರಂದು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಈ ನಿರ್ಬಂಧ ಜಾರಿಯಲ್ಲಿರಲಿದೆ.


