ಕೊಡಗಿಗೆ ಪ್ರತ್ಯೇಕ ಯೋಜನೆ: ಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಮಡಿಕೇರಿ: ಕೊಡಗು ಜಿಲ್ಲೆಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾದ ಬೃಹತ್ ಯೋಜನೆ ರೂಪಿಸಿ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಭಾಗಮಂಡಲದಲ್ಲಿ ಕಾವೇರಿ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಮುಖ್ಯಮಂತ್ರಿಯಾಗಿ ಕೊಡಗಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು ನೀಡಿದ ಅದ್ಧೂರಿ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಶಿವಕುಮಾರ್, ಶಾಸಕ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ನಿಮ್ಮೆಲ್ಲರ ಪ್ರತಿನಿಧಿಯಾಗಿ, ನಿಮ್ಮ ಶಾಸಕರೊಂದಿಗೆ ಕೈಜೋಡಿಸಿ ಕೊಡಗಿಗೆ ವಿಶೇಷ ಯೋಜನೆ ನೀಡಲು ಬದ್ಧನಿದ್ದೇನೆ” ಎಂದು ಅವರು ಹೇಳಿದರು.
ಇದೇ ವೇಳೆ 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಡಾ.ಮಂತರ್ ಗೌಡ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಿಎಂಗೆ ಅದ್ಧೂರಿ ಸ್ವಾಗತ ನೀಡಿದರು. ಡೊಳ್ಳು ಕುಣಿತ ಹಾಗೂ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅಭಿಮಾನ ವ್ಯಕ್ತಪಡಿಸಿದರು.
ಬಳಿಕ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಹಾಗೂ ಮಲಿಹಾ ಫಾತಿಮಾ ಅವರ ವಿವಾಹ ಸಮಾರಂಭದಲ್ಲೂ ಮುಖ್ಯಮಂತ್ರಿ ಪಾಲ್ಗೊಂಡರು.

