ಮಡಿಕೇರಿ ಕೋಟೆ ಆವರಣದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ
ಮಡಿಕೇರಿ: ಆ 15
ಕೊಡಗು ಜಿಲ್ಲಾಡಳಿತ ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗಣ್ಯಾತಿ ಗಣ್ಯರಿಂದ ಬೆಳಗ್ಗೆ 9 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಆಚರಿಸಲಾಯಿತು.
ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿ
ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನ ಮತ್ತು ಕನಸುಗಳನ್ನು ಸ್ಮರಿಸುವ ಪವಿತ್ರ ದಿನವನ್ನು ಆಚರಿಸುತ್ತಿದ್ದೇವೆ.
ಕೊಡಗು ಎಂದರೆ ಕೇವಲ ಪ್ರಕೃತಿಯ ಸೌಂದರ್ಯವಲ್ಲ, ಇದು ಶೌರ್ಯ, ತ್ಯಾಗ, ದೇಶಪ್ರೇಮ ಮತ್ತು ಸಂಸ್ಕೃತಿಯ ಸಂಗಮವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಹೊದಿಕೆಯ ನಡುವೆ ಕಾವೇರಿ ಹುಟ್ಟುವ ಈ ಪುಣ್ಯಭೂಮಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ತನ್ನದೇ ಆದ ಅಮೂಲ್ಯ ಕೊಡುಗೆಯನ್ನು ನೀಡಿದೆ.
ಕೊಡಗಿನ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ಗುಡ್ಡೆಮನೆ ಅಪ್ಪಯ್ಯಗೌಡ ಅವರಂತಹ ವೀರರನ್ನು ನಾವು ಮರೆಯಲು ಸಾಧ್ಯವಿಲ್ಲ. ಬ್ರಿಟಿಷರ ವಿರುದ್ಧದ ಹೋರಾಟದ ಆರಂಭಿಕ ಅಧ್ಯಾಯಗಳಲ್ಲೇ ಕೊಡಗಿನ ಮಣ್ಣಿನಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿತ್ತು.
ನಂತರ ಪಂದ್ಯಂಡ ಐ. ಬೆಳ್ಯಪ್ಪ ಅವರು ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವದೇಶಿ ಮತ್ತು ಸಾಮಾಜಿಕ ಸಮಾನತೆಯ ಸಂದೇಶವನ್ನು ಕೊಡಗಿನ ಜನರ ನಡುವೆ ಜನಾಂದೋಲ ಆಗಿಸಿದರು. ಅದಕ್ಕಾಗಿಯೇ ಅವರನ್ನು ಪ್ರೀತಿಯಿಂದ “ಕೊಡಗಿನ ಗಾಂಧಿ” ಎಂದು ಕರೆಯಲಾಯಿತು.
ಕೊಡಗಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ಜನಬೆಂಬಲವನ್ನು ಸಂಘಟಿಸುವಲ್ಲಿ ಪಂದ್ಯಂಡ ಬೆಳ್ಯಪ್ಪನವರ ಪಾತ್ರ ಅಪಾರ. ‘ಕೊಡಗು’ ಪತ್ರಿಕೆಯ ಮೂಲಕ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸುವ ಕೆಲಸವೂ ನಡೆಯಿತು. 1930ರ ಸತ್ಯಾಗ್ರಹ ಚಟುವಟಿಕೆಗಳಲ್ಲಿ ಅವರು ಸೇರಿದಂತೆ ಹಲವು ಹೋರಾಟಗಾರರು ಬಂಧನಕ್ಕೊಳಗಾದರು.
ಪಂದ್ಯಂಡ ಬೆಳ್ಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಸಿ.ಎಂ. ಪೂಣಚ್ಚ ಸೇರಿದಂತೆ ಸ್ಥಳೀಯ ನಾಯಕರು ಗಾಂಧೀಜಿಯವರನ್ನು ಕೊಡಗಿಗೆ ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1934ರ ಫೆಬ್ರವರಿ 21ರಿಂದ 23ರವರೆಗೆ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಿದ್ದರು.
ಗಾಂಧೀಜಿಯವರ ಆಗಮನದಿಂದ ಈ ಮಣ್ಣಿನಲ್ಲಿ ಸ್ವಾತಂತ್ರ್ಯದ ಕಿಡಿ ಇನ್ನಷ್ಟು ಪ್ರಜ್ವಲಿಸಿತು. ಸತ್ಯ, ಅಹಿಂಸೆ, ಅಸ್ಪೃಶ್ಯತಾ ನಿವಾರಣೆ, ಖಾದಿ, ಸ್ವಾವಲಂಬನೆ ಮತ್ತುಸಾಮಾಜಿಕ ಸಮಾನತೆಯ ಅವರ ಚಿಂತನೆಗಳು ಕೊಡಗಿನ ಹೋರಾಟಕ್ಕೆ ಹೊಸ ಚೈತನ್ಯ ನೀಡಿದವು.
ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ. ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ. ವೆಂಕಪ್ಪಯ್ಯ, ಗುಂಡುಗುಟ್ಟಿ ಮಂಜುನಾಥಯ್ಯ, ಎಂ.ಎಂ. ಸಿದ್ದಿಕ್, ಎಚ್.ಆರ್. ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂತಹ ಅಸಂಕ್ಯಾತ ವೀರರಿಗೆ ನಮ್ಮ ಗೌರವಪೂರ್ವಕ ನಮನಗಳು.
ಕೊಡಗಿನ ಮಹಿಳೆಯರೂ ಸತ್ಯಾಗ್ರಹ ಮತ್ತು ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿ ಈ ಮಣ್ಣಿನ ಪರಂಪರೆಯ ಮೌಲ್ಯ ಹೆಚ್ಚಿಸಿದ್ದಾರೆ. ಕೊಡಗಿನ ಮಣ್ಣಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ಸರ್ವರನ್ನೂ ಒಳಗೊಂಡ ಜನಮಾನಸದ ಹೋರಾಟವಾಗಿತ್ತು ಎನ್ನುವುದು ಹೆಮ್ಮೆಯ ಸಂಗತಿ.
ಸ್ವಾತಂತ್ರ್ಯ ಹೋರಾಟದ ಜೊತೆಗೆ ದೇಶದ ಗಡಿಗಳನ್ನು ಕಾಯುವ ಸೇನಾ ಪರಂಪರೆಯಲ್ಲಿಯೂ ಕೊಡಗು ಮುಂಚೂಣಿಯಲ್ಲಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಭಾರತದ ಸೇನಾ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಎರಡು ಮಹಾನ್ ಹೆಸರುಗಳು.
ಕೆ.ಎಂ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಭಾರತೀಯ ಸೇನಾ ಮುಖ್ಯಸ್ಥರಾಗಿ ದೇಶದ ಸೇನಾ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದರು. ಜನರಲ್ ತಿಮ್ಮಯ್ಯ ಅವರ ಸೈನಿಕ ನಾಯಕತ್ವವೂ ಭಾರತದ ರಕ್ಷಣಾ ಇತಿಹಾಸದ ಅಮೂಲ್ಯ ಅಧ್ಯಾಯ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೊಡಗು, ಸ್ವಾತಂತ್ರ್ಯವನ್ನು ರಕ್ಷಿಸಲು ಯೋಧರನ್ನೂ ಕೊಟ್ಟಿದೆ, ಕೊಡುತ್ತಿದೆ. ಇದೇ ಕೊಡಗಿನ ಮಣ್ಣಿನ ವೈಶಿಷ್ಟ್ಯ. ಹಾಗೆಯೇ, ನಮ್ಮ ಕೊಡಗು ಎಲ್ಲಾ ಧರ್ಮ, ಭಾಷೆ, ಜಾತಿ, ಸಮುದಾಯದ ಭೇದಗಳನ್ನು ಮೀರಿ ಎಲ್ಲರೂ ಒಂದಾಗಿ, ಎಲ್ಲರನ್ನೂ ಒಳಗೊಂಡಿರುವ ಸೌಹಾರ್ಧದ ತಪ್ಪಲಾಗಿದೆ.
ಕೊಡಗಿನ ಮತ್ತೊಂದು ದೊಡ್ಡ ಹಿರಿಮೆ ಎಂದರೆ ಇದರ ಪ್ರಕೃತಿ ಸಂಪತ್ತು. ಬ್ರಹ್ಮಗಿರಿ, ಪುಷ್ಪಗಿರಿ, ತಡಿಯಂಡಮೋಳ್, ಕಾವೇರಿ ನದಿ, ದಟ್ಟ ಅರಣ್ಯಗಳು, ಕಾಫಿ ತೋಟಗಳು,
ಜಲಪಾತಗಳಿಂದ ಮೈತುಂಬಿಕೊಂಡಿರುವ ಕೊಡಗು ಕನ್ನಡ ನಾಡಿನ ಸೌಂದರ್ಯ ಮತ್ತು ಕೀರ್ತಿಯನ್ನು ಹೆಚ್ಚಿಸಿದೆ.
ತಲಕಾವೇರಿಯಲ್ಲಿ ಉದ್ಭವಿಸುವ ಕಾವೇರಿ ಕರ್ನಾಟಕದ ಕೋಟ್ಯಂತರ ಜನರ ಬದುಕಿನ ಜೀವನಾಡಿ, ಕಾವೇರಿಯ ನೀರು ನಮ್ಮ ಜೀವಜಲ, ಕುಡಿಯುವ ನೀರಿನ ಜಲಮೂಲವೂ ಆಗಿರುವ ಕಾವೇರಿ ನಮ್ಮ ಹೊಲಗಳಿಗೆ, ನಗರಗಳಿಗೆ, ಕೈಗಾರಿಕೆಗಳಿಗೆ ಜೀವ ನೀಡುತ್ತದೆ.
ಭಾಗಮಂಡಲ, ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಪಾಡಿ ಇಗ್ಗುತಪ್ಪ, ನಾಪೋಕ್ಲು ಮತ್ತು ಇತರ ಪವಿತ್ರ ಕ್ಷೇತ್ರಗಳು ಕೊಡಗಿನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಆಳವನ್ನು ಸಾರುತ್ತವೆ.
ಕೊಡಗು ಜಿಲ್ಲೆ ಪ್ರಕೃತಿ ಮತ್ತು ಅಧ್ಯಾತ್ಮ ಪರಸ್ಪರ ಬೆಸೆದುಕೊಂಡಿವೆ. ಅರಣ್ಯವನ್ನು ದೇವರಂತೆ ಕಾಣುವ ಸಂಸ್ಕೃತಿ, ನದಿಯನ್ನು ತಾಯಿಯಂತೆ ಪೂಜಿಸುವ ಮನೋಭಾವ ಮತ್ತು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಜೀವನ ಪದ್ಧತಿ ಕೊಡಗಿನ ವಿಶಿಷ್ಟ ಪರಂಪರ.
. ಆದ್ದರಿಂದ ಕೊಡಗಿನ ಪ್ರಕೃತಿಯನ್ನು ಸಂರಕ್ಷಿಸುತ್ತಲೇ ಪ್ರವಾಸೋದ್ಯಮ, ಕೃಷಿ, ಕಾಫಿ, ತೋಟಗಾರಿಕೆ ಮತ್ತು ಸ್ಥಳೀಯ ಉದ್ಯೋಗಗಳನ್ನು ಬೆಳೆಸುವುದು ನಮ್ಮ ಆದ್ಯತೆಯಾಗಿದೆ.
ನಮ್ಮ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು “ಬೆಂಗಳೂರು ನಮ್ಮ ಕಿರೀಟ; ಕರ್ನಾಟಕ ನಮ್ಮ ಹೃದಯ” ಎಂಬ ಮಾತನ್ನು ಹೇಳಿದ್ದಾರೆ. ಇದು ಮುಖ್ಯಮಂತ್ರಿಗಳ ದೂರದೃಷ್ಟಿಯ ಅಭಿವೃದ್ಧಿ ದೃಷ್ಟಿಕೋನ. ಕರ್ನಾಟಕದ ಅಭಿವೃದ್ಧಿಯನ್ನು ಬೆಂಗಳೂರು ಕೇಂದ್ರಿತವಾಗಿರಿಸದೆ, ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ಅಭಿವೃದ್ಧಿಯ ಅವಕಾಶಗಳನ್ನು ವಿಸ್ತರಿಸಬೇಕು ಎಂದು ನಮ್ಮ ಸರ್ಕಾರ ನಾಡಿನ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಅಧ್ಯಾತ್ಮಿಕ ಪ್ರವಾಸೋಧ್ಯಮದಲ್ಲಿ ಕೊಡಗು ಕನ್ನಡ ನಾಡಿನ ಕಿರೀಟ ಎನ್ನುವ ಹೆಮ್ಮೆ ನಮಗಿದೆ.
ಜೊತೆಗೆ ಕೃಷಿಗೆ ಬಲ, ಕಾಫಿಗೆ ಮೌಲ್ಯವರ್ಧನೆ, ಯುವಕರಿಗೆ ಉದ್ಯೋಗ, ಪ್ರವಾಸೋದ್ಯಮಕ್ಕೆ ಹೊಸ ಅವಕಾಶ, ಮಹಿಳೆಯರಿಗೆ ಆರ್ಥಿಕ ಶಕ್ತಿ, ಗ್ರಾಮಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಪ್ರಕೃತಿಯ ಸಂಪೂರ್ಣ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ.
ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಬೆಳೆಗಾರರು ಮತ್ತು ಕೃಷಿಕರ ಬದುಕು ಬಲವಾಗಬೇಕು.
ಹವಾಮಾನ ಬದಲಾವಣೆ, ಅತಿವೃಷ್ಟಿ, ಅನಿಶ್ಚಿತ ಮಳೆ, ಬೆಲೆ ಏರಿಳಿತ ಮತ್ತು ವನ್ಯಜೀವಿ ಸಂಘರ್ಷದಂತಹ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುತ್ತಿದ್ದೇವೆ.
ಕೊಡಗಿನ ಕೃಷಿಯನ್ನು ಕೇವಲ ಉತ್ಪಾದನೆಯಾಗಿ ನೋಡುವುದಲ್ಲ; ಮೌಲ್ಯವರ್ಧನೆ, ಸಂಸ್ಕರಣೆ, ಬ್ರಾಂಡಿಂಗ್, ರಫ್ತು ಮತ್ತು ಪ್ರವಾಸೋದ್ಯಮದೊಂದಿಗೆ ಸಂಪರ್ಕಿಸುವ ಹೊಸ ಆರ್ಥಿಕತೆಯಾಗಿ ರೂಪಿಸಬೇಕಾಗಿದೆ.
ಕೊಡಗಿನ ಕಾಫಿ ವಿಶ್ವದ ಮಾರುಕಟ್ಟೆಯಲ್ಲಿ ಇನ್ನಷ್ಟು ಬಲವಾಗಿ ಗುರುತಿಸಿಕೊಳ್ಳಬೇಕು. “ಕೊಡಗು ಕಾಫಿ” ಎಂಬ ಹೆಸರೇ ಜಾಗತಿಕ ಗುಣಮಟ್ಟದ ಸಂಕೇತವಾಗುವ ದಿನವನ್ನು ನಾವು ನಿರ್ಮಿಸೋಣ.
ಕೊಡಗು ಈಗಾಗಲೇ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಆದರೆ ನಮ್ಮ ಗುರಿ ಕೇವಲ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವುದಲ್ಲ. ಪರಿಸರ ಸ್ನೇಹಿ ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಗ್ರಾಮೀಣ ಪ್ರವಾಸೋದ್ಯಮ, ಕಾಫಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಗಳನ್ನು ಸಮಗ್ರವಾಗಿ ಬೆಳೆಸಬೇಕು ಎನ್ನುವುದು ನನ್ನ ಗುರಿ.
ಪ್ರವಾಸಿಗರು ಕೊಡಗಿಗೆ ಬಂದು ಕೇವಲ ಬೆಟ್ಟ-ಜಲಪಾತಗಳನ್ನು ನೋಡಿ ಹಿಂದಿರುಗಬಾರದು; ಕೊಡಗಿನ ಸಂಸ್ಕೃತಿ, ವೀರ ಪರಂಪರೆ, ಕಾಫಿ, ಆಹಾರ, ಸಂಗೀತ, ದೇವಾಲಯಗಳು ಮತ್ತು ಜನಜೀವನವನ್ನು ಅನುಭವಿಸಿ ಹೋಗಬೇಕು. ಇದರಿಂದ ಸ್ಥಳೀಯ ಯುವಕರಿಗೆ ಮಾರ್ಗದರ್ಶಕ, ಹೋಂಸ್ಸೇ, ಸಾರಿಗೆ, ಆಹಾರ, ಕೈಗಾರಿಕೆ, ಕೃಷಿ ಉತ್ಪನ್ನಗಳ ಮಾರಾಟ ಸೇರಿದಂತೆ ಸಾವಿರಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು.
ಕೊಡಗಿನ ಅರಣ್ಯಗಳು ಕರ್ನಾಟಕದಷ್ಟೇ ಅಲ್ಲ, ಇಡೀ ದೇಶದ ಅಮೂಲ್ಯ ನೈಸರ್ಗಿಕ ಸಂಪತ್ತು, ನಾಗರಹೊಳೆ, ಬ್ರಹ್ಮಗಿರಿ ಮತ್ತು ಇತರ ಅರಣ್ಯ ಪ್ರದೇಶಗಳು ನಮ್ಮ ಜೀವವೈವಿಧ್ಯದ ಕಾವಲುಗಾರರು. ಆದರೆ ಅರಣ್ಯದ ಸಂರಕ್ಷಣೆಯ ಜೊತೆಗೆ ಅರಣ್ಯದ ಅಂಚಿನಲ್ಲಿ ಬದುಕುತ್ತಿರುವ ಜನರ ಸುರಕ್ಷತೆ ಮತ್ತು ಜೀವನೋಪಾಯವೂ ನಮ್ಮ ಆದ್ಯತೆ ಆಗಿದೆ.
ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ವೈಜ್ಞಾನಿಕ ಪರಿಹಾರಗಳು, ತ್ವರಿತ ಪರಿಹಾರಧನ, ಸುರಕ್ಷತಾ ಕ್ರಮಗಳು ಮತ್ತು ಅರಣ್ಯ ಸಂರಕ್ಷಣೆಯನ್ನು ಸಮನ್ವಯಗೊಳಿಸಬೇಕು. “ಅರಣ್ಯವೂ ಉಳಿಯಬೇಕು; ಅರಣ್ಯದಂಚಿನ ಜನರೂ ನೆಮ್ಮದಿಯಿಂದ ಬದುಕಬೇಕು’ ಎನ್ನುವುದು ನಮ್ಮ ಪರಿಸರ ನ್ಯಾಯದ ಸಂಕಲ್ಪ.
ಈ ಸಂಕಲ್ಪದ ಜೊತೆಗೇ ನಮ್ಮ ಸರ್ಕಾರ ಕೊಡಗಿನ ಸರ್ವರ ಅಭಿವೃದ್ಧಿಗೆ ಮತ್ತು ಸಮಗ್ರ ಪ್ರಗತಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಿದೆ.
ಶಕ್ತಿ ಯೋಜನೆಯ ಅಡಿಯಲ್ಲಿ 1.85 ಲಕ್ಷ ವಯಸ್ಕ ಮಹಿಳೆಯರು ಹಾಗೂ 4.54 ಲಕ್ಷ ಹೆಣ್ಣುಮಕ್ಕಳು/ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದಾರೆ. ದಿನಕ್ಕೆ ಸರಾಸರಿ 16,747 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, 8 ಆಗಸ್ಟ್ 2026ರವರೆಗೆ ಸಂಸ್ಥೆಗೆ ₹82.92 ಕೋಟಿ ಆದಾಯ ಬಂದಿದೆ.
ಗೃಹಲಕ್ಷ್ಮಿ: ಏಪ್ರಿಲ್ 2026 1.21 ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಏಪ್ರಿಲ್ 2026ರವರೆಗೆ ಕೊಡಗಿನ ಕುಟುಂಬದ ಯಜಮಾನಿ ಮಹಿಳೆಯರಿಗೆ ತಿಂಗಳಿಗೆ ₹2,000ರಂತೆ ಒಟ್ಟು ₹673.28 ಕೋಟಿ DBT ಮೂಲಕ ಜಮೆ ಮಾಡಲಾಗಿದೆ.
ಗೃಹಜ್ಯೋತಿ: ಇಲ್ಲಿಯವರೆಗೆ 2.03 ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಜುಲೈ 2026ರವರೆಗೆ ₹26,462.92 ಕೋಟಿ ಸಹಾಯಧನ ನೀಡಲಾಗಿದೆ.
ಅನ್ನಭಾಗ್ಯ: ಕೊಡಗಿನಲ್ಲಿ 97,570 ಅರ್ಹ ಪಡಿತರ ಚೀಟಿ ಕುಟುಂಬಗಳ ಸದಸ್ಯರಿಗೆ ಪಡಿತರ ವಿತರಣೆಯಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ 5 ಕೆ.ಜಿ. ಮತ್ತು ಅನ್ನಭಾಗ್ಯದ ಹೆಚ್ಚುವರಿ 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಣೆ ಆಗುತ್ತಿದೆ.
ಜಿಲ್ಲೆಗೆ ಮಾಸಿಕವಾಗಿ NFSA ಅಡಿ 17,959 ಕ್ವಿಂಟಾಲ್ ಹಾಗೂ ಅನ್ನಭಾಗ್ಯ ಅಡಿ 15,523 ಕ್ವಿಂಟಾಲ್ ಸೇರಿ ಒಟ್ಟು 33,482 ಕ್ವಿಂಟಾಲ್ ಅಕ್ಕಿ ಅಗತ್ಯ ಮತ್ತು ಪೂರೈಕೆ ಆಗುತ್ತಿದೆ.
ಯುವನಿಧಿ: ಜೂನ್ 2026ರ ಅಂತ್ಯಕ್ಕೆ 2,347 ಅಭ್ಯರ್ಥಿಗಳು ನೋಂದಣಿಯಾಗಿದ್ದು 2,013 ಫಲಾನುಭವಿಗಳಿಗೆ ₹5.97 ಕೋಟಿ ನೇರವಾಗಿ ಖಾತೆಗೆ ವರ್ಗಾವಣೆ ಆಗಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ
ನಿವೇಶನ ರಹಿತ ಪರಿಶಿಷ್ಟ ಪಂಗಡದವರಿಗೆ ನಿವೇಶನ ಒದಗಿಸಲು 61.25 ಎಕರೆ ಜಾಗ ಕಾಯ್ದಿರಿಸಲಾಗಿದೆ.
ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರಿನಲ್ಲಿ 7.50 ಎಕರೆ ಪ್ರದೇಶದಲ್ಲಿ 40 ವಸತಿ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಆಗಿದೆ.
ಪರಿಶಿಷ್ಟ ಪಂಗಡದ 24 ಅಂತರ್ಜಾತಿ ವಿವಾಹ ದಂಪತಿಗಳಿಗೆ ₹67 ಲಕ್ಷ ಪ್ರೋತ್ಸಾಹಧನ.
ಮುಖ್ಯಮಂತ್ರಿಯವರ ಆದಿವಾಸಿ ಗೃಹ ಭಾಗ್ಯ ಯೋಜನೆಯಡಿ ತಲಾ ₹4.50 ಲಕ್ಷ ಘಟಕ ವೆಚ್ಚದಲ್ಲಿ 175 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ.
ನಗರಾಭಿವೃದ್ಧಿ ಮತ್ತು ಕೆರೆ ಪುನಶ್ಚತನ
ಅಮೃತ್ 2.0: ಮಡಿಕೇರಿ ನಗರಸಭೆ ಮತ್ತು ವಿರಾಜಪೇಟೆ ಪುರಸಭೆಯ 3 ಕೆರೆಗಳ ಅಭಿವೃದ್ಧಿಗೆ ₹4.84 ಕೋಟಿ ನೀಡಲಾಗಿದೆ.
* ರೋಶನರ ಕರೆ – ₹1.57 ಕೋಟಿ
ಪಂಪಿನ ಕೆರೆ – ₹1.67 ಕೋಟಿ
ವಿರಾಜಪೇಟೆಯ ಶಿವಕರ – ₹1.60 ಕೋಟಿ,
ಆರೋಗ್ಯ ಮೂಲಸೌಕರ್ಯ
ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯನ್ನು ₹95.60 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ಅಡಿಪಾಯ ಕಾಮಗಾರಿ ಪ್ರಗತಿಯಲ್ಲಿದೆ.
ಕುಶಾಲನಗರದಲ್ಲಿ ₹41 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಹೊಸ ತಾಲ್ಲೂಕು ಆಸ್ಪತ್ರೆ; ನಿವೇಶನ ಗುರುತಿಸಲಾಗಿದ್ದು, ಕಾಮಗಾರಿ ಆರಂಭಿಸಬೇಕಿದೆ.
ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ; ಕಾಮಗಾರಿ ಆರಂಭಿಸಬೇಕಿದೆ.
ಜಿಲ್ಲೆಯಲ್ಲಿ 5 ಉಪಕೇಂದ್ರಗಳ ಹೊಸ ಕಟ್ಟಡಗಳಿಗೆ ಮಂಜೂರಾತಿ; ಹೊಸತೋಟ ಮತ್ತು ಶಿರಂಗಾಲದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಾಮಾನ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
HPV ಲಸಿಕಾ ಕಾರ್ಯಕ್ರಮದಲ್ಲಿ ಗುರಿ ಸಾಧಿಸಿ ರಾಜ್ಯದಲ್ಲಿ ಕೊಡಗು 3ನೇ ಸ್ಥಾನ ಪಡೆದಿದೆ.
ಸ್ವ-ಸಹಾಯ ಸಂಘಗಳು ಮತ್ತು ಗ್ರಾಮೀಣ ಜೀವನೋಪಾಯ
NRLM/ಸಂಜೀವಿನಿ ಅಡಿ 102 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು, 3,403 ಸ್ವ-ಸಹಾಯ ಸಂಘಗಳು ಮತ್ತು 35,830 ಸದಸ್ಯರು ಇದ್ದಾರೆ.
2025-26ರಲ್ಲಿ 66 ಗ್ರಾಮ ಪಂಚಾಯಿತಿ ಮಟ್ಟದ 202 ಸ್ವ-ಸಹಾಯ ಸಂಘಗಳಿಗೆ ₹3.03 ಕೋಟಿ ಸಮುದಾಯ ಬಂಡವಾಳ ನಿಧಿ ಹಂಚಿಕೆಯಾಗಿದೆ.
72 ಸ್ವ-ಸಹಾಯ ಸಂಘಗಳಿಗೆ ತಲಾ ₹20,000ರಂತೆ ₹14.40 ಲಕ್ಷ ಸುತ್ತು ನಿಧಿ, 51 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ ಬಿಡುಗಡೆ ಮಾಡಲಾಗಿದೆ.
ಕೃಷಿ ಮತ್ತು ತೋಟಗಾರಿಕೆ
ಯಾಂತ್ರೀಕರಣ ಯೋಜನೆಯಡಿ 52 ರೈತರಿಗೆ ಉಪಕರಣ ಖರೀದಿಗೆ ₹15.15 ಲಕ್ಷ ಸಹಾಯಧನ ಮಾಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 22,106 ಮಾನವ ದಿನಗಳ ಸೃಜನ, 385 ಎಕರೆ ಪ್ರದೇಶ ಒಳಗೊಂಡು ₹77.15 ಲಕ್ಷ ಆರ್ಥಿಕ ಸಾಧನೆ ಮಾಡಲಾಗಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 40 ಜೈವಿಕ ಗೊಬ್ಬರ ಘಟಕ/ಪ್ರಮಾಣಗಳನ್ನು ಉಚಿತವಾಗಿ ವಿತರಣೆಯಾಗಿದೆ.
ಮೀನುಗಾರಿಕೆಯನ್ನು ಪರ್ಯಾಯ ಆದಾಯ ಮೂಲವಾಗಿ ಉತ್ತೇಜಿಸಲು 2026-27ರಲ್ಲಿ ಜುಲೈ 2026ರವರೆಗೆ 13 ಲಕ್ಷ ಬಿತ್ತನೆ ಮೀನು ಮರಿಗಳ ವಿತರಣೆಯಾಗಿದೆ.
ಕುಡಿಯುವ ನೀರು – ಜಲ ಜೀವನ್ ಮಿಷನ್
JJM ಬ್ಯಾಚ್ 1, 2 ಮತ್ತು 3ರಡಿ 455 ಜನವಸತಿಗಳಿಗೆ ನಳ ನೀರು ಸಂಪರ್ಕ ಕಲ್ಪಿಸಲು ₹354.44 ಕೋಟಿ ಕ್ರಿಯಾಯೋಜನೆ ಅನುಮೋದನೆ ದೊರತಿದೆ.
ಈವರೆಗೆ 374 ಜನವಸತಿಗಳ ಕಾಮಗಾರಿ ಪೂರ್ಣ; 82.21% ಭೌತಿಕ ಪ್ರಗತಿಯಾಗಿದೆ.
ಪೂರ್ಣಗೊಂಡ ಕಾಮಗಾರಿಗಳಲ್ಲಿ 241 ಜನವಸತಿಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಿದೆ.
ಈವರೆಗೆ ₹248.56 ಕೋಟಿ ವೆಚ್ಚ, 70.12% ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 1.44 ಲಕ್ಷ ಗ್ರಾಮೀಣ ಮನೆಗಳು; ಈವರೆಗೆ 1.23 ಲಕ್ಷ ಮನೆಗಳಿಗೆ ನಳ ಸಂಪರ್ಕ, 85.74% ಗುರಿ ಸಾಧನೆ ಮಾಡಲಾಗಿದೆ.
ಉಳಿದ ಕಾಮಗಾರಿಗಳನ್ನು ಡಿಸೆಂಬರ್ 2026ರ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ.
ರಸ್ತೆ ಮತ್ತು ಮೂಲಸೌಕರ್ಯ
2026-27ರಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ
₹20 ಕೋಟಿ; 18 ಕಾಮಗಾರಿಗಳು ಹಂತದಲ್ಲಿದೆ. 5 ಪೂರ್ಣ, 9 ಪ್ರಗತಿಯಲ್ಲಿ, 4 ಟೆಂಡರ್
ಕಾಲುಸಂಕ ನಿರ್ಮಾಣಕ್ಕೆ ₹200 ಲಕ್ಷ; 19 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ, ಅಂದಾಜುಪಟ್ಟಿ ಅನುಮೋದನೆ ಹಂತದಲ್ಲಿದೆ.
ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಿರಾಜಪೇಟೆಗೆ 17 ಕಾಮಗಾರಿಗಳಿಗೆ ₹30 ಕೋಟಿ – 1 ಪೂರ್ಣ, 8 ಪ್ರಗತಿಯಲ್ಲಿ, 8 ಟೆಂಡರ್ ಹಂತದಲ್ಲಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ 8 ಕಾಮಗಾರಿಗಳಿಗೆ ₹15 ಕೋಟಿ; ಕಾಮಗಾರಿಗಳು ಪ್ರಗತಿಯಲ್ಲಿ, 2 ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ.
ರಾಜ್ಯ ವಿಪತ್ತು ಉಪಶಮನ ನಿಧಿಯಡಿ 18 ಕಾಮಗಾರಿಗಳಿಗೆ ₹10.56 ಕೋಟಿ ಪೂರ್ಣ, 12 ಪ್ರಗತಿಯಲ್ಲಿ, 4 ಟೆಂಡರ್ ಹಂತದಲ್ಲಿದೆ. 2
5054 ಸೇತುವೆ ಪುನರ್ ನಿರ್ಮಾಣ ಯೋಜನೆಯಡಿ ವಿರಾಜಪೇಟೆಗೆ 7 ಕಾಮಗಾರಿಗಳಿಗೆ ₹12.50 ಕೋಟಿ ಹಾಗೂ ಮಡಿಕೇರಿಗೆ 3 ಕಾಮಗಾರಿಗಳಿಗೆ ₹10 ಕೋಟಿ; ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣ ಮೂಲಸೌಕರ್ಯ
2025-26ರಲ್ಲಿ ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯುಮೆಂಟ್ನ 255 ಕಾಮಗಾರಿಗಳಿಗೆ ₹1,385.32 ಲಕ್ಷ ವೆಚ್ಚ ಮಾಡಿ 100% ಪ್ರಗತಿ ಸಾಧಿಸಲಾಗಿದೆ.
2026-27ರ ಕ್ರಿಯಾಯೋಜನೆಗಳು ರೂಪುಗೊಳ್ಳುತ್ತಿದ್ದು, ಮಳೆಗಾಲದ ಬಳಿಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ.
ಸ್ವಚ್ಛ ಭಾರತ ಮತ್ತು ತ್ಯಾಜ್ಯ ನಿರ್ವಹಣೆ
ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ 102 ಗ್ರಾಮ ಪಂಚಾಯಿತಿಗಳಿಗೆ ಮಂಜೂರಾತಿ; 97 ಪಂಚಾಯಿತಿಗಳಲ್ಲಿ ಘಟಕ ನಿರ್ಮಾಣ ಪೂರ್ಣಗೊಂಡಿದೆ.
ಕೆ.ನಿಡುಗಣೆ ಗ್ರಾಮ ಪಂಚಾಯಿತಿಯಲ್ಲಿ ಗೋಬರ್ಧನ್ ಘಟಕ ಪೂರ್ಣ; ಬಿಟ್ಟಂಗಾಲ ಮತ್ತು ಗುಡ್ಡೆಹೊಸೂರಿನಲ್ಲಿ ಪುನರ್ ವಸ್ತು ಸಂಪಾದನಾ ಸೌಲಭ್ಯ ಘಟಕಗಳು ಪ್ರಗತಿಯಲ್ಲಿವೆ.
ಭಾಗಮಂಡಲ ಮತ್ತು ಸುಂಟಿಕೊಪ್ಪದಲ್ಲಿ FSTP ಘಟಕಗಳು ನಿರ್ಮಾಣಗೊಂಡು ಕಾರ್ಯಾಚರಣೆಯಲ್ಲಿವೆ.
ಸ್ವಚ್ಛ ಭಾರತ ಅಭಿಯಾನದಡಿ 6 ಕಾಮಗಾರಿಗಳು; ರಾಜ್ಯದಲ್ಲೇ ಪ್ರಥಮ ಬಾರಿಗೆ 3 ಗ್ರಾಮ ಪಂಚಾಯಿತಿಗಳಿಗೆ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ಮತ್ತು ವಿಲೇವಾರಿ ಘಟಕ ಖರೀದಿ ಮಾಡಲಾಗಿದ್ದು ಈ ಕ್ರಮ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ.
ಗ್ರಾಮೀಣ ಉದ್ಯೋಗ
ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತ್ರಿಯಲ್ಲಿ 100 ದಿನಗಳಿಂದ 125 ದಿನಗಳಿಗೆ ಹೆಚ್ಚಳವಾಗಿದೆ.
ಕೊಡಗು ಜಿಲ್ಲೆಗೆ 5.88 ಲಕ್ಷ ಮಾನವ ದಿನಗಳ ಗುರಿ ಇದ್ದು ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ.
ಸ್ವಯಂ ಉದ್ಯೋಗ ಮತ್ತು ವಿವಿಧ ವರ್ಗಗಳ ಕಲ್ಯಾಣ
ಸ್ವಯಂ ಉದ್ಯೋಗ ನೇರ ಸಾಲ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಮಹಿಳೆಯರಿಗೆ ಹೊಲಿಗೆ ಯಂತ್ರ, ಬ್ಯಾಂಕ್ ಸಹಯೋಗದ ಸ್ವಯಂ ಉದ್ಯೋಗ ಸಾಲ, ಅರಿವು-ಶೈಕ್ಷಣಿಕ ಸಾಲ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಗೊಳಿಸಲಾಗಿದೆ.
ವಸತಿ, ಕ್ರೀಡೆ ಮತ್ತು ಶಿಕ್ಷಣ ಮೂಲಸೌಕರ್ಯ
ಕೊಡಗು ಜಿಲ್ಲೆಯಲ್ಲಿ ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ವಿ.ಬಾಡಗದಲ್ಲಿ ₹45 ಕೋಟಿ ವೆಚ್ಚದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ.
ವಿವಿಧೆಡೆ ವಿದ್ಯುತ್ ಘಟಕಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಮೂಲಕ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು ಇವುಗಳಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಂಡಿವೆ.
ಇಷ್ಟೆಲ್ಲಾ ಸಾಧನೆಗಳ ಜೊತೆಗೆ ನಮ್ಮ ಸರ್ಕಾರ ಹಲವಾರು ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ರಾಜ್ಯಾದ್ಯಂತ ಹತ್ತು ಸಾವಿರ ಯುವ ಕ್ಲಬ್ಗಳನ್ನು ಸ್ಥಾಪಿಸಲಿದ್ದು ಪ್ರತೀ ಪಂಚಾಯ್ತಿ ಮತ್ತು ಪ್ರತೀ ವಾರ್ಡ್ಗೆ ಒಂದರಂತೆ ಯುವ ಸಂಘಗಳು ಸ್ಥಾಪನೆಯಾಗುತ್ತಿವೆ. ಇದರಿಂದ ರಾಜ್ಯದಾದ್ಯಂತ ಯುವ ನಾಯಕತ್ವದ ಹೊಸ ಪಡ ನಿರ್ಮಾಣವಾಗಲಿದೆ.
ಇಂತಹ ಹತ್ತು ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಸ್ವಾತಂತ್ರ್ಯದ ಅಮೃತ ಕಾಲವನ್ನು ಸಮಾನತೆ, ಸೌಹಾರ್ದತೆ, ಅಭಿವೃದ್ಧಿ ಮತ್ತು ಮಾನವೀಯತೆಯ ಹೊಸ ಯುಗವನ್ನಾಗಿ ಪರಿವರ್ತಿಸೋಣ.
ಗುಡ್ಡೆಮನೆ ಅಪ್ಪಯ್ಯಗೌಡರ ಧೈರ್ಯ, ಪಂದ್ಯಂಡ ಬೆಳ್ಯಪ್ಪನವರ ಗಾಂಧೀ ಚಿಂತನ, ಸಿ.ಎಂ. ಪೂಣಚ್ಚನವರ ರಾಷ್ಟ್ರೀಯ ಬದ್ಧತೆ, ಕೆ.ಎಂ. ಕಾರ್ಯಪ್ಪ ಮತ್ತು ಕೆ.ಎಸ್. ತಿಮ್ಮಯ್ಯ ಅವರ ದೇಶಸೇವೆ ನಮ್ಮ ಮುಂದಿನ ಪಯಣಕ್ಕೆ, ಇಡೀ ನಾಡಿನ ಸೌಹಾರ್ದ ಪರಂಪರ ಮತ್ತು ಪ್ರಗತಿಗೆ ದಾರಿದೀಪವಾಗಲಿ.


