ವಾಂಟೆಡ್ ಬಾಲ ಚಿತ್ರದಲ್ಲಿ ಕೊಡವ ಮಹಿಳೆಯರಿಗೆ ಅವಮಾನ: ವಕೀಲ ಎಂ.ಟಿ. ಕಾರ್ಯಪ್ಪ ಆರೋಪ.

“ವಾಂಟೆಡ್ ಬಾಲ” ಚಿತ್ರದಲ್ಲಿ ಕೊಡವ ಸಂಸ್ಕೃತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ವಾಂಟೆಡ್ ಬಾಲ ಚಿತ್ರದಲ್ಲಿ ಕೊಡವ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ದೃಶ್ಯಗಳನ್ನು ಚಿತ್ರಿಸಲಾಗಿದ್ದು, ಕೊಡವ ಸಂಸ್ಕೃತಿಯನ್ನೂ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ವಕೀಲ ಹಾಗೂ ಸಮಾಜ ಸೇವಕ ಎಂ.ಟಿ. ಕಾರ್ಯಪ್ಪ ಆರೋಪಿಸಿದ್ದಾರೆ.

ಚಿತ್ರದಲ್ಲಿ ಪತಿ ಸೇನೆಯಲ್ಲಿ ಕರ್ತವ್ಯದಲ್ಲಿರುವ ಸಂದರ್ಭದಲ್ಲಿ ತೋಟವನ್ನು ನೋಡಿಕೊಳ್ಳುವ ಕೊಡವ ಮಹಿಳೆ ಹಾಗೂ ಕಾರ್ಮಿಕ ವರ್ಗಕ್ಕೆ ಸೇರಿದ ಬ್ರೋಕರ್ ನಡುವೆ ಪ್ರೀತಿ, ಆಕರ್ಷಣೆ ಮೂಡುವ ರೀತಿಯಲ್ಲಿ ಸನ್ನಿವೇಶಗಳನ್ನು ಪರೋಕ್ಷವಾಗಿ ಚಿತ್ರಿಸಲಾಗಿದೆ. ಇದರಿಂದ ಕೊಡವ ಮಹಿಳೆಯರ ಬಗ್ಗೆ ಹೊರಗಿನ ಪ್ರೇಕ್ಷಕರಲ್ಲಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ಕಾರ್ಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ಕಾರ್ಮಿಕರು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿದ್ದು, ಅವರಿಗೆ ಗೌರವ ನೀಡುತ್ತೇವೆ. ಆದರೆ ಇಂತಹ ಕಥೆಯನ್ನು ಹೇಳಲು ಕೊಡವ ಮಹಿಳೆಯನ್ನೇ ಹಾಗೂ ಕೊಡವ ವೇಷಭೂಷಣವನ್ನೇ ಏಕೆ ಬಳಸಲಾಗಿದೆ ಎಂಬುದು ನಮ್ಮ ಪ್ರಶ್ನೆ ಎಂದು ಅವರು ಆರೋಪಿಸಿದ್ದಾರೆ.
ಕೊಡವ ಉಡುಪು ಧರಿಸಿದ ಮಹಿಳೆಯನ್ನು ತೋರಿಸಿದಾಗ ಪ್ರೇಕ್ಷಕರು ಸಹಜವಾಗಿಯೇ ಆಕೆಯನ್ನು ಕೊಡವತಿ ಎಂದೇ ಗುರುತಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಚಿತ್ರದಲ್ಲಿ ಕಾರ್ಮಿಕ ವರ್ಗ ಮತ್ತು ಬ್ರೋಕರ್‌ಗಳನ್ನೂ ನಿರ್ದಿಷ್ಟ ದೃಷ್ಟಿಕೋನದಲ್ಲಿ ಪ್ರತಿಬಿಂಬಿಸಿರುವ ಬಗ್ಗೆ ಪ್ರಶ್ನೆಗಳಿವೆ. ಸಾಮಾಜಿಕ ವರ್ಗ, ಮಹಿಳೆಯರ ಘನತೆ ಮತ್ತು ಕೊಡವ ಸಂಸ್ಕೃತಿಯನ್ನು ಒಂದೇ ಕಥೆಯಲ್ಲಿ ಜೋಡಿಸಿರುವ ರೀತಿಯ ಕುರಿತು ಆಳವಾದ ಚರ್ಚೆ ಅಗತ್ಯವಿದೆ ಎಂದಿದ್ದಾರೆ. ಬ್ರೋಕರ್ ಗಳು ಕೊಡವತಿಯರನ್ನು ಕೆಟ್ಟದಾಗಿ ಬಳಸಿಕೊಳ್ಳುವ ಬಗ್ಗೆಯೂ ಈ ಚಿತ್ರದಲ್ಲಿ ತೋರಿಸಲಾಗಿದೆ. ಒಟ್ಟಾರೆ ಕೊಡವ ಮಹಿಳೆಯರನ್ನು ಕೀಳು ದೃಷ್ಟಿಯಿಂದ ನೋಡುವಂತ ದೃಶ್ಯಗಳನ್ನು ಸೃಷ್ಟಿಸಲಾಗಿದ್ದು ಇದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು ಎಂದು ಅವರು ಆರೋಪಿಸಿದ್ದಾರೆ.

ಈ ವಿಚಾರ ಬೆಳಕಿಗೆ ಬಂದ ಬಳಿಕ ಕೊಡವ ಸಮುದಾಯದ ವಿವಿಧೆಡೆಗಳಿಂದ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಅಭಿಯಾನವೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ತಮ್ಮನ್ನು ಸಂಪರ್ಕಿಸಿ, “ತಪ್ಪಾಗಿದೆ, ನಾವು ನಿಲ್ಲಿಸುತ್ತೇವೆ, ನೀವು ಕಾನೂನಾತ್ಮಕವಾಗಿ ಮುಂದುವರಿಯಬೇಡಿ” ಎಂದು ಮನವಿ ಮಾಡಲಾಗಿದೆ ಎಂದು ಕಾರ್ಯಪ್ಪ ತಿಳಿಸಿದ್ದಾರೆ.

“ನಾವು ಕೊಡವರು ಸಂಘರ್ಷ ಮುಂದುವರಿಸಲು ಬಯಸುವುದಿಲ್ಲ. ಆದರೆ ಕೇವಲ ಮಾತಿನ ಭರವಸೆ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿಯ ಚಿತ್ರಣ ಮರುಕಳಿಸದಂತೆ ಲಿಖಿತ ಭರವಸೆ ನೀಡಬೇಕು. ಅಗತ್ಯವಿದ್ದರೆ ಕಾನೂನುಬದ್ಧ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ; ಕೊಡವ ಸಂಸ್ಕೃತಿ ಮತ್ತು ಕೊಡವ ಮಹಿಳೆಯರ ಘನತೆಯ ರಕ್ಷಣೆಗೆ ಮಾತ್ರ” ಎಂದು ಎಂ.ಟಿ. ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.

Exit mobile version