ಭಾರೀ ಗಾಳಿ ಮಳೆಗೆ ಮರ ಉರುಳಿ ಇಬ್ಬರು ಮಹಿಳಾ ಕಾರ್ಮಿಕರ ದುರ್ಮರಣ
ಸೋಮವಾರಪೇಟೆ, ಜು.29: ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಬಿಳಿಗೇರಿ ಟಾಟಾ ಕಾಫಿ ಎಸ್ಟೇಟ್‌ನಲ್ಲಿ ಬುಧವಾರ ಭಾರೀ ಗಾಳಿ ಬೀಸಿದ ಪರಿಣಾಮ ಬೃಹತ್ ಮರವೊಂದು ಕಾರ್ಮಿಕರ ಮೇಲೆ ಉರುಳಿ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತರನ್ನು ಪರ್ಬಿನಾ ಖಾತುನ್ (29) ಹಾಗೂ ಅಲೆಮನ್ (48) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುದ್ದುಮಹಾದೇವ ಹಾಗೂ ತಹಸೀಲ್ದಾರ್ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಭಾರೀ ಮಳೆ ಹಾಗೂ ಗಾಳಿಯಿಂದ ಮರಗಳು ಉರುಳುವ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ತೋಟ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

