ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ದಿನಾ ನರಕಯಾತನೆ: ಹದಗೆಟ್ಟ ರಸ್ತೆಗಳಿಂದ ವಾಹನ ಸವಾರರ ಪರದಾಟ
ಮಡಿಕೇರಿ: ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಮಡಿಕೇರಿ ನಗರದಲ್ಲಿ ಹದಗೆಟ್ಟ ರಸ್ತೆಗಳು ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ನಿತ್ಯ ನರಕಯಾತನೆ ಉಂಟುಮಾಡುತ್ತಿವೆ. ನಗರದ ಹಲವೆಡೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮಳೆ ನೀರು ತುಂಬಿ ಕೆರೆಯಂತಾಗಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.
ಸಂಪಿಗೆಕಟ್ಟೆ ಪ್ರದೇಶದಲ್ಲಿ ರಸ್ತೆ ಗುಂಡಿಗಳಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು, ಗುಂಡಿಗಳ ಆಳ ಅಂದಾಜಿಸಲು ಸಾಧ್ಯವಾಗದ ಕಾರಣ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ಅಪಾಯದ ನಡುವೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸೀಟ್ ರಸ್ತೆಯೂ ಗುಂಡಿಗಳಿಂದ ತುಂಬಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಶಾಲಾ ಮಕ್ಕಳನ್ನು ಪ್ರತಿದಿನ ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗುವ ಪೋಷಕರಿಗೂ ರಸ್ತೆ ಗುಂಡಿಗಳು ಜೀವಕ್ಕೆ ಅಪಾಯವಾಗುತ್ತಿವೆ. ಮಳೆ ನೀರಿನಿಂದ ಗುಂಡಿಗಳು ಕಾಣಿಸದೇ ಜಾರಿಬೀಳುವ ಭೀತಿ ಹೆಚ್ಚಾಗಿದೆ.
ನಗರಸಭೆ ಕೆಲವೆಡೆ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯ ಕೈಗೊಂಡಿದ್ದರೂ, ಮಳೆಯ ನಡುವೆ ನಡೆಸುತ್ತಿರುವ ಈ ತೇಪೆ ಕಾಮಗಾರಿ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಬೇಸಿಗೆ ಅವಧಿಯಲ್ಲಿ ರಸ್ತೆ ಅಭಿವೃದ್ಧಿಗೆ ಶಾಶ್ವತ ಕ್ರಮ ಕೈಗೊಳ್ಳದೆ, ಮಳೆಗಾಲ ಆರಂಭವಾದ ಬಳಿಕ ತುರ್ತು ತೇಪೆ ಕಾಮಗಾರಿ ನಡೆಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.
ವರ್ಷಪೂರ್ತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಮಡಿಕೇರಿ ನಗರದಲ್ಲಿ ಕೆಲವೆಡೆ ರಸ್ತೆಗಳು ಗದ್ದೆಯಂತಾಗಿದ್ದರೆ, ಇನ್ನೂ ಕೆಲವೆಡೆ ಆಳವಾದ ಗುಂಡಿಗಳು ನಿರ್ಮಾಣಗೊಂಡಿವೆ. ಸಂಬಂಧಪಟ್ಟ ಇಲಾಖೆ ತಕ್ಷಣ ಶಾಶ್ವತ ರಸ್ತೆ ದುರಸ್ತಿ ಕಾಮಗಾರಿ ಕೈಗೊಂಡು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

