
ಪೊನ್ನಂಪೇಟೆ: ಬಿಡದಿ ಸಮೀಪದ ಭೈರಮಂಗಲ ಚಲೋ ರೈತ ಹೋರಾಟದಲ್ಲಿ ಭಾಗವಹಿಸಲು ಬಸ್ ಮೂಲಕ ತೆರಳುತ್ತಿದ್ದ ಕೊಡಗು ಜಿಲ್ಲಾ ರೈತ ಸಂಘದ ಸದಸ್ಯರನ್ನು ತಿತಿಮತಿ ಬಳಿ ಪೊಲೀಸರು ತಡೆದ ಘಟನೆ ಶುಕ್ರವಾರ ನಡೆದಿದೆ.
ಭೈರಮಂಗಲ ಚಲೋ ಹೋರಾಟಕ್ಕೆ ಕಾನೂನಾತ್ಮಕವಾಗಿ ತೆರಳುತ್ತಿದ್ದರೂ ಮಾರ್ಗ ಮಧ್ಯೆ ಬಸ್ ತಡೆದು ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ ಎಂದು ರೈತರು ಆರೋಪಿಸಿದರು. ಇದರಿಂದ ಸ್ಥಳದಲ್ಲೇ ರೈತರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಹಕ್ಕಿನಡಿ ನಡೆಯುವ ಹೋರಾಟದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಳೆಯ ನಡುವೆಯೂ ರೈತರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಕೆಲಕಾಲ ಮಾತುಕತೆ ನಡೆಯಿತು. ತಿತಿಮತಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ರೈತರು ಸ್ಥಳದಲ್ಲೇ ಜಾಗೃತಿ ಮೂಡಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

