ಭಾಗಮಂಡಲ, ಜುಲೈ 19: ದಕ್ಷಿಣ ಭಾರತದ ಜೀವನದಿ ಕಾವೇರಿಯ ತೀರ್ಥಕ್ಷೇತ್ರ ಭಾಗಮಂಡಲದಲ್ಲಿರುವ ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಕಾವೇರಿ ನೀರಾವರಿ ನಿಗಮದಿಂದ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ.
ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದಿಂದ ತಿಳಿದುಬಂದಿದೆ.
ಈ ಅನುದಾನದಡಿ ಮೇಲ್ಸೇತುವೆ ಆವರಣದ ಅಭಿವೃದ್ಧಿ, ನೀರು ಹರಿಯುವ ಪೈಪ್‌ಗಳ ಸುಧಾರಣೆ, ಮೇಲ್ಸೇತುವೆ ಕೆಳಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ, ಕನ್ನಿಕೆ ನದಿಗೆ ಪಾದಚಾರಿ ಸೇತುವೆ ಹಾಗೂ ಕಾವೇರಿ ನದಿಗೆ ಪಾದಚಾರಿ ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಬೆಂಗಳೂರು ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ರೋಹಿತ್ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, 2026ರ ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ.

