ಕಾಡಾನೆ-ಮಾನವ ಸಂಘರ್ಷ ನಿಯಂತ್ರಣದಲ್ಲಿ ವಿಫಲವಾದ ರಾಜ್ಯ ಸರ್ಕಾರ

ಮಡಿಕೇರಿ: ಕಾಡಾನೆ-ಮಾನವ ಸಂಘರ್ಷ ನಿಯಂತ್ರಣದಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿಯಿಂದ “ಜನಾಕ್ರೋಶ ವಾಹನ ಜಾಥಾ” ನಡೆಯಿತು.
ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರು ಭಾಗಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ರೈತರು, ಕಾರ್ಯಕರ್ತರು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು.
ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್ಸಿ ಸುಜಾಕುಶಾಲಪ್ಪ ಪಾಲ್ಗೊಂಡಿದ್ದರು.
“ಬಿಜೆಪಿ ಅವಧಿಯಲ್ಲಿ 120 ಕೋಟಿ, ಕಾಂಗ್ರೆಸ್ ಸರ್ಕಾರ 120 ಕೋಟಿ ಅನುದಾನ ಘೋಷಿಸಿತ್ತು. ಆದರೆ ರೈಲ್ವೆ ಬ್ಯಾರಿಕೇಡ್, ಆನೆ ಕಂದಕ ಎಷ್ಟು ಮಾಡಿದ್ದೀರಿ?” ಎಂದು ಬೋಪಯ್ಯ ಪ್ರಶ್ನಿಸಿದರು. ಆನೆ ಹಾವಳಿಯಿಂದ ಕಾರ್ಮಿಕರು ತೋಟಕ್ಕೆ ಹೋಗಲು ಭಯಪಡುತ್ತಿದ್ದಾರೆ ಎಂದು ಹೇಳಿದರು.
ಸಿ ಮತ್ತು ಡಿ ಲ್ಯಾಂಡ್ ಅರಣ್ಯಕ್ಕೆ ವರ್ಗಾವಣೆ ಆದೇಶದಿಂದ ಸೋಮವಾರಪೇಟೆಯಲ್ಲಿ 5000 ಕುಟುಂಬಗಳು ಸಂಕಷ್ಟದಲ್ಲಿವೆ” ಎಂದು ಅಪ್ಪಚ್ಚು ರಂಜನ್ ಆರೋಪಿಸಿದರು.
ಸಂಸದ ಯದುವೀರ್ ಮಾತನಾಡಿ “ವನ್ಯಜೀವಿ ಸಂಘರ್ಷಕ್ಕೆ ಕೇಂದ್ರ 350 ಕೋಟಿ ರೂ. ಅನುದಾನ ನೀಡಿದೆ. ಆದರೆ ರಾಜ್ಯ ಸರ್ಕಾರ ಬಳಕೆ ಮಾಡುತ್ತಿಲ್ಲ. ಮದೆನಾಡು, ತಿತಿಮತಿಯಲ್ಲಿ ಸಾವುಗಳಾದರೂ ಕ್ರಮವಿಲ್ಲ” ಎಂದು ದೂರಿದರು.

