ಶ್ವಾಸಕೋಶದ ಸೋಂಕಿನಿಂದ ಉರಗತಜ್ಞ ಮಹಮ್ಮದ್ ಅನೀಸ್ ನಿಧನ
ಕಾಳಿಂಗ ಸರ್ಪದ ಬಗ್ಗೆ ಅದ್ಯಯನ ನಡೆಸಿದ್ದ ಅನೀಸ್

ಉರಗ ತಜ್ಞ, ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿಯ ಮುಖ್ಯದ್ವಾರದ ವಿನ್ಯಾಸಕಾರ ಮಹಮ್ಮದ್ ಅನೀಸ್(55) ಶ್ವಾಸಕೋಶ ಸೋಂಕಿನಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಬೆಂಗಳೂರಿನವರಾದ ಇವರು ಹಾವುಗಳನ್ನು ಹಿಡಿಯುವ, ನಂತರದಲ್ಲಿ ಅವುಗಳ ಬಗ್ಗೆ ಅಧ್ಯಯನ ನಡೆಸಿ ಸಾರ್ವಜನಿಕರಲ್ಲಿ ಉರಗಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಇವರು ಹತ್ತು ವರ್ಷಗಳ ಹಿಂದೆ ನಾಗರಹೊಳೆ ಉದ್ಯಾನದಂಚಿನ ವೀರನಹೊಸಹಳ್ಳಿಯಲ್ಲಿ ಜಮೀನು ಖರೀದಿಸಿ, ತಮ್ಮದೇ ಆದ ವೈಲ್ಡ್ನೆಸ್ ರೀಟ್ರೀಟ್ ಎಂಬ ಸಂಸ್ಥೆ ಹುಟ್ಟು ಹಾಕಿ, ಆಮೂಲಕ ವನ್ಯಜೀವಿಗಳು ಅದರಲ್ಲೂ ಹಾವಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಬೆಂಗಳೂರಿನಲ್ಲಿ ಸಾವಿರಾರು ಹಾವುಗಳನ್ನು ಹಿಡಿದು ಜೀವಕಂಠಕವನ್ನು ತಪ್ಪಿಸಿದ್ದ ಇವರನ್ನು ಸ್ನೇಕ್ ಅನೀಸ್ ಎಂದೇ ಪ್ರಖ್ಯಾತರಾಗಿದ್ದರು.
ನಾಗರಹೊಳೆ ಹೆಬ್ಬಾಗಿಲ
ಗಜಪಯಣ ಆರಂಭವಾಗುವ ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿಯ ಮುಖ್ಯದ್ವಾರವನ್ನು ಆಕರ್ಷಕವಾಗಿ ನಿರ್ಮಿಸುವಲ್ಲಿ ಹಾಗೂ ಆನೆದಾಳಿಗೊಳಗಾದ ನಾಗರಹೊಳೆ ಉದ್ಯಾನದ ಮುಖ್ಯಸ್ಥರಾಗಿದ್ದ ದಿ.ಮಣಿಕಂದನ್ರ ಹೆಸರಿನಲ್ಲಿ ವೀರನಹೊಸಹಳ್ಳಿ ವಲಯದಲ್ಲಿ ನಿರ್ಮಿಸಿರುವ ಕಳ್ಳಭೇಟೆ ತಡೆ ಶಿಬಿರವನ್ನು ಸಹ ಆಕರ್ಷಕವಾಗಿ ವಿನ್ಯಾಸಗೊಳಿಸಿದ ಕೀರ್ತಿ ಇವರದ್ದು. ಯಾವುದೇ ವನ್ಯಜೀವಿ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಇವರು
ಇವರು ಕೆಲಕಾಲ ಚನೈನ ಸ್ನೇಕ್ ಪಾರ್ಕ್ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ವಿಶ್ವಪ್ರಸಿದ್ಧ ಹರ್ಪೆಟಾಲಜಿಸ್ಟ್ ರೊಮುಲಸ್ ವಿಟೇಕರ್ ಅವರೊಂದಿಗೆ ಕೆಲಸ ಮಾಡಿದ ಅನುಭವವೂ ಅವರಿಗೆ ಇತ್ತು. ಅನೀಸ್ ಅವರು ಅತ್ಯಂತ ಅಪಾಯಕಾರಿ ಪರಿಸ್ಥಿತಿಗಳಲ್ಲಿಯೂ ಧೈರ್ಯ ಹಾಗೂ ತಾಳ್ಮೆಯಿಂದ ಹಾವುಗಳನ್ನು ರಕ್ಷಿಸುತ್ತಿದ್ದರು.
ಕಾಳಿಂಗ ಸರ್ಪದ ಡಾಕ್ಯೂಮೆಂಟರಿ:
ಕಾಳಿಂಗ ಸರ್ಪಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರು ನ್ಯಾಷನಲ್ ಜಿಯೋಗ್ರಪಿ ಚಾನಲ್ಗೆ ಕಾಳಿಂಗ ಸರ್ಪದ ಜೀವನ ಕುರಿತು ಹಾಗೂ ಅನಿಮಲ್ ಪ್ಲಾನೆಟ್ ಚಾನಲ್ಗೆ ವಿವಿಧ ರೀತಿಯ ಹಾವುಗಳ ಬಗ್ಗೆ ಡಾಕ್ಯೂಮೆಂಟರಿ ತಯಾರಿಸಿಕೊಟ್ಟ ಕೀರ್ತಿ ಇವರದ್ದು.
ಉರಗತಜ್ಞ ಮಹಮ್ಮದ್ ಅನೀಸ್ ಸಾವು ವನ್ಯಜೀವಿ ಪ್ರೇಮಿಗಳಿಗೆ ನೋವು ತಂದಿದೆ. ನಾಗರಹೊಳೆಯ ಹುಣಸೂರು ಉಪ ವಿಭಾಗದ ಎಸಿಎಫ್ ಲಕ್ಷಿö್ಮಕಾಂತ್ ಮತ್ತು ಸಿಬ್ಬಂದಿಗಳು ಹಾಗೂ ನಾಗಮಂಗಲ ವಿಭಾಗದ ಎಸಿಎಫ್ ಶಿವರಾಂ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಿತು. ಇವರ ನೂರಾರು ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಂಬನಿ ಮಿಡಿದರು. ಇವರಿಗೆ ಪತ್ನಿ ತೈಬಾ, ಪುತ್ರ ಶೊಯೆಬ್ ಹಾಗೂ ಪುತ್ರಿ ಸಿಮ್ರಾ ಇದ್ದಾರೆ.

