
ಓ ಈಶ್ವರನೇ.. ಈಶ್ವರ್ ಖಂಡ್ರೆಯನ್ನು ಕಂಡರೆ ಹೇಳುವೆಯ!
ಆನೆ ಮಾನವ ಸಂಘರ್ಷಕ್ಕೆ ಇಂದು ಮತ್ತೊಂದು ಜೀವ ಬಲಿಯಾಗಿದೆ. ಮೂರು ದಿನದ ಹಿಂದೆಯಷ್ಟೇ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಜಲಜ ಎಂಬಾಕೆಯನ್ನು ಆನೆ ತುಳಿದು ಕೊಂದಿತ್ತು.. ಮದೆನಾಡು ಬೆಟ್ಟತ್ತೂರುವಿನಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಒಂಟಿ ಆನೆಯೊಂದು ತುಳಿದು ಕೊಂದ ಬೆನ್ನಲ್ಲೇ ಈಗ ಮತ್ತೊಂದು ಸಾವಿನ ಆಘಾತಕಾರಿ ಸುದ್ದಿ ಕೊಡಗಿನ ಜನರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಿದ್ದಾಪುರದ ಚೌರಿರ ಗಣಪತಿ ಎಂಬ ಬೆಳೆಗಾರನನ್ನು ಇಂದು ಹಾಡ ಹಗಲೇ ಒಂಟಿ ಸಲಗವೊಂದು ತುಳಿದು ಕೊಂದಿದ್ದು ಕೊಡಗಿನ ಜನ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ.
*ಯಾಕಿಷ್ಟು ನಿರ್ಲಕ್ಷ್ಯ?*
ಕಳೆದ ಹಲವಾರು ವರ್ಷಗಳಿಂದ ನೂರಾರು ಸಾವು ನೋವುಗಳಾಗುತ್ತಿದ್ದರೂ ಕರ್ನಾಟಕವನ್ನು ಆಡಳಿತ ಮಾಡಿದ ಎಲ್ಲಾ ರಾಜಕೀಯ ಪಕ್ಷಗಳು ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿದೆ. ಹೊರ ಜಿಲ್ಲೆಗೆ ನೀಡುವ ಪ್ರಾತಿನಿಧ್ಯವನ್ನು ಕೊಡಗಿನ ಕಾರ್ಮಿಕರ ಮತ್ತು ಕಾಫಿ ಬೆಳೆಗಾರರ ಜೀವಕ್ಕೆ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಈಗಿನ ಜನಪ್ರತಿನಿಧಿಗಳ ಬಳಿಯೂ ಉತ್ತರವಿಲ್ಲ, ಹಿಂದಿನವರ ಬಳಿಯೂ ಉತ್ತರವಿರಲಿಲ್ಲ..
*ಕೊಡಗು ಸಾವಿನ ಮನೆಯಂತಾಗಿದೆ*
ಕೊಡಗು ಜಿಲ್ಲೆ ಈಗ ಅಕ್ಷರಶಃ ಸಾವಿನ ಮನೆಯಂತಾಗಿದೆ. ಕೆಲಸಕ್ಕೆ ತೆರಳುವ ಕಾರ್ಮಿಕರು ಮತ್ತೆ ಜೀವಂತ ಹಿಂತುರುಗಿ ಮನೆಗೆ ಬರುವ ಯಾವ ಖಚಿತ ಲಕ್ಷಣಗಳೂ ಇಲ್ಲ. ಅದೆಷ್ಟು ಶಾಶ್ವತ ಅಂಗವೈಫಲ್ಯದ ಜೀವಗಳು ಮನೆಯ ಹಾಸಿಗೆಯಿಂದ ಶೌಚಾಲಯಕ್ಕೆ ಹೋಗಲಾಗದೇ ಮಲಗಿದ್ದಾರೆ ಎಂಬ ಕಹಿ ಸತ್ಯ ಅದೆಷ್ಟು ಜನರಿಗೆ ಗೊತ್ತು? ಆನೆ ದಾಳಿಯಿಂದ ಜೀವ ಕಳೆದುಕೊಂಡು ಸರಕಾರದ ಪರಿಹಾರ ಮೊತ್ತವನ್ನು ಕಳೆದುಕೊಂಡು ಅದೆಷ್ಟು ಕುಟುಂಬದ ಮಕ್ಕಳು ಮಹಿಳೆಯರು ಬೀದಿಗೆ ಬಂದಿದ್ದಾರೆ ಗೊತ್ತೆ? ಆದರು ಕರುಣೆಯಿಲ್ಲದ ಕಟುಕ ಜನಪ್ರತಿನಿಧಿಗಳ ಮದ್ಯೆ ಭರವಸೆಯಿಲ್ಲದ ಬದುಕು ಸಾಗಿಸುವ ಕಾರ್ಮಿಕರಿಗೆ ಯಾರು ಆಸರೆ ?
*ಅರಣ್ಯ ಇಲಾಖೆ ಬದುಕಿದ್ದು ಸತ್ತಿದೆ*
ಅರಣ್ಯ ಇಲಾಖೆ ರಾಜ್ಯದಲ್ಲಿ ಇದ್ದು ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಅರಣ್ಯ ಇಲಾಖೆಯೊಳಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸ್ವತ ಆಡಳಿತ ಸರಕಾರದ ಅರಣ್ಯ ಮತ್ತು ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹಲವು ಬಾರಿ ಪತ್ರಿಕಾ ಪ್ರಕಟಣೆ ನೀಡಿದರು ಅದಕ್ಕೆ ಪ್ರತ್ಯುತ್ತರವೇ ಇಲ್ಲ. ಎಲ್ಲಾ ಆಯಾಮಗಳಲ್ಲೂ ಅರಣ್ಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರೂ ಅವರ ವಿರುದ್ಧ ಯಾವುದೇ ಕ್ರಮವಿಲ್ಲ.
*ಖಂಡ್ರೆಯನ್ನು ಕಂಡರೆ ತಿಳಿಸಿ*
ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಾವು ನೋವುಗಳಾಗುತ್ತಿದ್ದರೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತ್ರ ಕೊಡಗು ಜಿಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲದಂತೆ ತಮ್ಮ ಪಾಡಿಗೆ ತಾವು ಆರಾಮವಾಗಿ ಇದ್ದಾರೆ. ಇದಕ್ಕಿಂತ ಅವಮಾನ ಕೊಡಗಿಗೆ ಬೇರೊಂದಿದೆಯೇ?
ಇಲ್ಲಿವರೆಗೆ ಕೊಡಗಿನ ಅರಣ್ಯ ಸಚಿವರು ಅಧಿಕಾರಿಗಳ ಜೊತೆ ಕೊಡಗಿನಲ್ಲಿ ಕೊಡಗಿನ ಸಮಸ್ಯೆ ಬಗ್ಗೆ ಸಭೆ ಮಾಡಿದ್ದೆ ಇಲ್ಲ. ಇಷ್ಟೊಂದು ಅನಾವುತಗಳು ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಆಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುವುದನ್ನು ಅವಲೋಕಿಸಿ.. ಇಂತಹ ನಿಷ್ಕ್ರಿಯ ಅರಣ್ಯ ಮಂತ್ರಿಗಳ ಅವಶ್ಯಕತೆ ಕೊಡಗಿನ ಜನರಿಗಿದೆಯೇ?
ಮಾನ್ಯ ಅರಣ್ಯ ಸಚಿವರೇ ಆನೆಗಳ ಮೂಲಕ ನಮ್ಮವರನ್ನು ಬಲಿ ಪಡೆದದ್ದು ಸಾಕು, ಇನ್ನಾದರೂ ಬನ್ನಿ ಜಿಲ್ಲೆಗೆ..
ಕೊಡಗು ಎಂಬ ಸಾವಿನ ಮನೆ ನಿಮಗಾಗಿ ಕಣ್ಣೀರಿನೊಂದಿಗೆ ಕಾಯುತ್ತಿದೆ.
ಸುರೇಶ್ ಬಿಳಿಗೇರಿ

