ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ- ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬಲ: ಎನ್ ಎಸ್ ಯು ಐ ಕೊಡಗು ಜಿಲ್ಲಾಧ್ಯಕ್ಷ ಪಿ. ಎಂ.ಅಬ್ದುಲ್ ರಾಶಿದ್

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಹೊಣೆಗಾರಿಕೆಯ ಮನೋಭಾವ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಅತ್ಯಂತ ಶ್ಲಾಘನೀಯ ಮತ್ತು ಸ್ವಾಗತಾರ್ಹವಾಗಿದೆ ಎಂದು ಎನ್.ಎಸ್.ಯು.ಐ ಕೊಡಗು ಜಿಲ್ಲಾಧ್ಯಕ್ಷ ಪಿ. ಎಂ.ಅಬ್ದುಲ್ ರಾಶಿದ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವವರು ವಿದ್ಯಾರ್ಥಿ ಜೀವನವೇ ಭವಿಷ್ಯದ ನಾಯಕತ್ವಕ್ಕೆ ಬುನಾದಿಯಾಗುವ ಅತ್ಯಂತ ಮಹತ್ವದ ಹಂತವಾಗಿದೆ. ವಿದ್ಯಾರ್ಥಿ ಸಂಘಗಳ ಚುನಾವಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ನೈಜ ಅನುಭವ ಸಿಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಸಂಘಟನೆ ಕೌಶಲ್ಯ, ನಾಯಕತ್ವ ಸಾಮರ್ಥ್ಯ, ಪರಸ್ಪರ ಗೌರವ, ಸಮನ್ವಯ ಮತ್ತು ಸಮಾಜದ ಸಮಸ್ಯೆಗಳ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ಭವಿಷ್ಯದಲ್ಲಿ ಸಮಾಜಮುಖಿ ಹಾಗೂ ಜವಾಬ್ದಾರಿಯುತ ನಾಯಕರು ರೂಪುಗೊಳ್ಳಲು ಸಹಕಾರಿಯಾಗುತ್ತದೆ.
ಹಲವು ವರ್ಷಗಳಿಂದ ವಿದ್ಯಾರ್ಥಿ ಸಂಘಗಳ ಚುನಾವಣೆಗಳು ನಡೆಯದಿರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ವ್ಯಕ್ತಪಡಿಸುವ ಅವಕಾಶ ಕಡಿಮೆಯಾಗಿತ್ತು. ಈಗ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಚೈತನ್ಯ ತುಂಬುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ತೀರ್ಮಾನ ವಿದ್ಯಾರ್ಥಿ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡದ್ದಾಗಿದೆ
.ವಿದ್ಯಾರ್ಥಿ ಸಂಘಗಳ ಚುನಾವಣೆಗಳು ಕೇವಲ ಹುದ್ದೆಗಾಗಿ ನಡೆಯುವ ಸ್ಪರ್ಧೆಯಾಗದೇ, ವಿದ್ಯಾರ್ಥಿಗಳ ಸಮಸ್ಯೆಗಳು, ಕಾಲೇಜು ಅಭಿವೃದ್ಧಿ, ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯಗಳ ಸುಧಾರಣೆ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗೆ ಬಲವಾದ ವೇದಿಕೆಯಾಗಬೇಕು. ಆಯ್ಕೆಯಾಗುವ ವಿದ್ಯಾರ್ಥಿ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ವಿದ್ಯಾರ್ಥಿಗಳ ಧ್ವನಿಯನ್ನು ಆಡಳಿತದ ಮುಂದೆ ತಲುಪಿಸುವ ಕೆಲಸ ಮಾಡಬೇಕು.ಈ ನಿರ್ಧಾರದಿಂದ ಕಾಲೇಜು ಆಡಳಿತ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನ ಮತ್ತಷ್ಟು ಬಲವಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ನಾಯಕತ್ವವನ್ನು ಪ್ರದರ್ಶಿಸಲು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿದ ನಾಗರಿಕರಾಗಿ ಬೆಳೆದು ಬರಲು ಇದು ಉತ್ತಮ ಅವಕಾಶವಾಗಿದೆ.ಆದ್ದರಿಂದ ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಎನ್.ಎಸ್.ಯು.ಐ ಸಂಪೂರ್ಣವಾಗಿ ಸ್ವಾಗತಿಸುತ್ತಿದ್ದು, ವಿದ್ಯಾರ್ಥಿ ಸಮುದಾಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ. ಎಸ್. ಪೊನ್ನಣ್ಣ ,ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ , ಎನ್ ಎಸ್ ಯು ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ಅವರಿಗೂ ಪಿ. ಎಂ.ಅಬ್ದುಲ್ ರಾಶಿದ್ ಅಭಿನಂದನೆ ಸಲ್ಲಿಸಿದ್ದಾರೆ.

