ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಹೊರತು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು:- ಜಿಲ್ಲೆಯ ಹಿರಿಯ ದಾನಿ ಕೈಬುಲಿರ ಪಾರ್ವತಿ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಲಿಟಲ್ ಫ್ಲವರ್ಸ್ ಶಾಲೆ ಹುದಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೈಬುಲಿರ ಬೋಪಯ್ಯ ಸ್ಮಾರಕ ನಡೆದ ದತ್ತಿ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ಕೊಡಗು ಜಿಲ್ಲೆಯ 10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಸೋಮವಾರಪೇಟೆ ತಾಲೂಕಿನ ನೀಡ್ತಾ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ ಎಸ್ ಪೂರ್ವಿಕ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಮುಂದುವರೆದ ಅವರು ವಿದ್ಯಾರ್ಥಿಗಳ ಪಾಲಿಗೆ ಅಧ್ಯಾಪಕರು ಶಿಲ್ಪಿಗಳಂತೆ ಪೋಷಕರು ಒಂದು ಕಲ್ಲಿನ ರೀತಿಯಲ್ಲಿರುವ ವಿದ್ಯಾರ್ಥಿಯನ್ನು ಶಾಲೆಗೆ ಒಪ್ಪಿಸಿದ ಸಂದರ್ಭದಲ್ಲಿ ಅಧ್ಯಾಪಕರು ಅವರನ್ನು ತಿದ್ದಿ ತೀಡಿ ಉತ್ತಮವಾದ ಶಿಲ್ಪವನ್ನಾಗಿ ಮಾಡುತ್ತಾರೆ. ಅಧ್ಯಾಪಕರ ಈ ಸೇವೆ ವಿದ್ಯಾರ್ಥಿಗಳು ಮರೆಯಕೂಡದು ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಶೈಕ್ಷಣಿಕ ವಿದ್ಯೆಯೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಕೂಡ ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮ ಪಡಬೇಕು. ನಮ್ಮಲ್ಲಿರುವ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ ದೊರೆತರೆ ನಾಳೆ ಹಳ್ಳಿಗಾಡಿನಿಂದ ಬಂದಂತಹ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟಿನಲ್ಲಿ ಹೆಸರು ಮಾಡಲು ಸಾಧ್ಯವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಲಿಟಲ್ ಫ್ಲವರ್ಸ್ ಶಾಲೆಯ ಕಾರ್ಯದರ್ಶಿ ಶ್ರೀಮತಿ ಆಶಾ ಜ್ಯೋತಿ ಸತೀಶ್ ರವರು ಮಾತನಾಡುತ್ತಾ ಸಾಹಿತ್ಯ ಪರಿಷತ್ ಒಂದು ಉತ್ತಮವಾದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದಾರೆ ಗೌರವ ಪಡೆಯುತ್ತಾರೆ ಎನ್ನುವ ಅನುಭವವನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.

ದತ್ತಿ ಆಶಯದಂತೆ ಶಿಕ್ಷಣದ ಅವಶ್ಯಕತೆಯ ಕುರಿತು ಮಾತನಾಡಿದ ಪೊನ್ನಂಪೇಟೆ ಕೆ.ಪಿ.ಎಸ್ ಪ್ರೌಢಶಾಲೆಯ ಅಧ್ಯಾಪಕಿ ಶ್ರೀಮತಿ ನಳಿನಿ ರವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾಭ್ಯಾಸದ ಅವಶ್ಯಕತೆ ತುಂಬಾ ಇದೆ, ಕಲಿತಷ್ಟು ಸಾಲುವುದಿಲ್ಲ. ವಿದ್ಯಾರ್ಥಿಗಳು ಪಠ್ಯೇತರ ವಿಚಾರಗಳನ್ನು ಕೂಡ ಅಭ್ಯಾಸ ಮಾಡುವ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ಉಪಸಿತರಿದ್ದ ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂದ ಪ್ರಮೋದ್ ಗಣಪತಿ ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ್ ಶಾಲೆಯ ಮುಖ್ಯೋಪಾಧ್ಯಾಯನಿ ಕೆ.ಎಲ್ ರಶ್ಮಿ ಮಾತನಾಡಿದರು. 10ನೇ ತರಗತಿಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು. ಪೂರ್ವಿಕ ಅವರನ್ನು ಸನ್ಮಾನಿಸಲಾಯಿತು ದತ್ತಿದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ ರವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಸರ್ವೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾನಂಗಡ ಅರುಣ್ ರವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾನಂಗಡ ಅರುಣ್ ಮಾತನಾಡುತ್ತಾ ಹಳ್ಳಿಯ ಶಾಲೆಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಅನುವು ಮಾಡಿಕೊಟ್ಟಿದೆ ಇದರಿಂದ ಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಅನುಭವ ಮತ್ತು ಶೈಕ್ಷಣಿಕ ಪ್ರಗತಿ ಆಗುತ್ತಿದೆ ಎಂದರು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ, ನಿರ್ದೇಶಕ ಟಿ ಆರ್ ವಿನೋದ್, ಸದಸ್ಯರಾದ ಉಳುವಂಗಡ ಉದಯ್, ಅಜಯ್ ಉಪಸ್ಥಿತರಿದ್ದರು.

ಅಧ್ಯಾಪಕಿ ಶ್ರೀಮತಿ ಪವಿತ್ರ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಅಧ್ಯಾಪಕಿ ಶ್ರೀಮತಿ ನವ್ಯ ರವರು ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಪಾರ್ವತಿ ವಂದಿಸಿದರು.

Exit mobile version