ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ – ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸೆಸ್ಕ್ ಚೆಲ್ಲಾಟ ಸಲ್ಲದು -ಪ್ರತಿಭಟನೆ ಎಚ್ಚರಿಕೆ ನೀಡಿದ -ಮಹಮ್ಮದ್ ಕುರೇಶಿ

 

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ಪ್ರತಿನಿತ್ಯ ರಾತ್ರಿ ವೇಳೆ ನಿರಂತರವಾಗಿ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಪರೀಕ್ಷಾ ದಿನಗಳು ಹತ್ತಿರವಾಗುತ್ತಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಸಂಬಂಧಪಟ್ಟ ಸೆಸ್ಕ್ ಇಲಾಖೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಾಪೋಕ್ಲು ಸೆಸ್ಕ್ ಕಚೇರಿ ಎದರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಕುರೇಶಿ ಎಚ್ಚರಿಕೆ ನೀಡಿದ್ದಾರೆ.

 

ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾಪೋಕ್ಲು ವ್ಯಾಪ್ತಿಯ ವಿದ್ಯುತ್ ಫೀಡರ್ ನಲ್ಲಿ ಜಾಲ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಬೆಳಿಗ್ಗೆ 10ಗಂಟೆಯಿಂದ ಸಂಜೆ 5ವರೆಗೂ ನಾಪೋಕ್ಲು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಉಂಟಾಗಲಿದೆ ಎಂದು ಸೆಸ್ಕ್ ಇಲಾಖೆ ಪ್ರಕಟಣೆ ನೀಡಲಾಗುತ್ತಿದೆ. ಆದರೆ ರಾತ್ರಿಯಿಂದ ಮುಂಜಾನೆವರೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ಸಮಯದಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎಂದು ಕುರೇಶಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ಅಲ್ಲದೆ ಮುಸಲ್ಮಾನರ ಪವಿತ್ರ ರಂಜಾನ್ ತಿಂಗಳು ಕೂಡ ಆರಂಭವಾಗಿದ್ದು ವಿದ್ಯುತ್ ಅವಶ್ಯಕವಾಗಿದೆ. ನಿರಂತರ ವಿದ್ಯುತ್ ವ್ಯೆತ್ಯೆಯೆಯಿಂದ ಸಮಸ್ಯೆ ಉಂಟಾಗುತ್ತಿದೆ. ಅದರಂತೆ ಪಟ್ಟಣದಲ್ಲಿರುವ ಹಾಲು,ಮಾಂಸ ಮಾರಾಟ ಮಳಿಗೆ ಸೇರಿದಂತೆ ಇನ್ನಿತರ ಮಳಿಗೆಯ ವರ್ತಕರಿಗೂ ವಿದ್ಯುತ್ ಸಮಸ್ಯೆಯಿಂದ ತೊಂದರೆ ಉಂಟಾಗುತ್ತಿದೆ.ಮುಂದಿನ ದಿನಗಳಲ್ಲಿ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗುತ್ತಿದ್ದು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವಂತ್ತಾಗಲಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಜಾಲ ಬಲವರ್ಧನೆ ಕಾಮಗಾರಿ ವೇಳೆ ವಿದ್ಯುತ್ ಕಡಿತಗೊಳಿಸಲಿ. ಆದರೆ ರಾತ್ರಿ ಸಮಯ ವಿದ್ಯುತ್ ಕಡಿತಗೊಳಿಸಿ ಜನರಿಗೆ ಸಮಸ್ಯೆ ಉಂಟುಮಾಡುವುದು ಸರಿಯಲ್ಲ ಎಂದು ಕುರೇಶಿ ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಸೆಸ್ಕ್ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆಯನ್ನು ಸರಿದೂಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಾಪೋಕ್ಲು ಸೆಸ್ಕ್ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Exit mobile version